ADVERTISEMENT

ಬೋಗಸ್ ಬಿಲ್‌ಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 13:15 IST
Last Updated 18 ಜನವರಿ 2011, 13:15 IST

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಬೋಗಸ್ ಕಾಮಗಾರಿ ಮತ್ತು ಹಣ ದುರುಪಯೋಗಕ್ಕೆ ಅವಕಾಶ ದೊರೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕೊರಡಕೇರಾ ಕ್ಷೇತ್ರದ ನೂತನ ಜಿ.ಪಂ ಸದಸ್ಯ ಪರಸಪ್ಪ ಕತ್ತಿ ಸೋಮವಾರ ಹೇಳಿದರು.

ಮದಲಗಟ್ಟಿ ಬಳಿ ವಜ್ಜರಬಂಡಿ ಗ್ರಾಮೀಣ ರಸ್ತೆಯಲ್ಲಿ ಉದ್ಯೋಗ ಖಾತರಿ ಯೋಜನೆ ಕೆಲಸಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಈ ಯೋಜನೆ ಹಣ ದುರುಪಯೋಗ ದಲ್ಲಿ ಕೊರಡಕೇರಾ ಗ್ರಾ.ಪಂ ಕುಖ್ಯಾತಿ ಹೊಂದಿರುವುದು ಗೊತ್ತಾಗಿದೆ, ಹಾಗಾಗಿ ಈ ಬಾರಿ ಕೂಲಿಕಾರರಿಗೆ ಕೆಲಸ ದೊರೆಯಬೇಕು ಮತ್ತು ಮಾಡಿದ ಕೆಲಸ ಕಾರ್ಯಗಳು ಕಣ್ಣಿಗೆ ಕಾಣುವಂತಿರಬೇಕು, ಒಟ್ಟಾರೆ ಯೋಜನೆ ಹಣ ಸದ್ಬಳಕೆಯಾಗಬೇಕು ಎಂಬುದು ತಮ್ಮ ಉದ್ದೇಶವಾಗಿದೆ ಎಂದರು.
 
ಬೋಗಸ್ ಬಿಲ್‌ಗಳು ಸೃಷ್ಟಿಯಾದದ್ದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸುತ್ತೇನೆ, ಅಲ್ಲದೇ ತಮ್ಮನ್ನೂ ಸೇರಿ ರಾಜಕಾರಣಿಗಳು, ಅಧಿಕಾರಸ್ಥರು ಯಾರ ಮಾತಿಗೂ ಮಣಿಯದೇ ನಿಯಮಾವಳಿ ಪ್ರಕಾರ, ಜನರ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವಂತೆ ಗ್ರಾ.ಪಂ ಸಿಬ್ಬಂದಿಗೆ ಹೇಳಿರುವುದಾಗಿ ಪರಸಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ವಿವರ ನೀಡಿದ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೋಟೂರು, ಸಾರ್ವಜನಿಕ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗಿದೆ, ನಂತರ ವೈಯಕ್ತಿಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು. ಕಾರ್ಯದರ್ಶಿ ಚಂದಪ್ಪ ಮತ್ತಿತರರು ಸ್ಥಳದಲ್ಲಿದ್ದರು. ರೂ 50 ಸಾವಿರ ವೆಚ್ಚದಲ್ಲಿ ಮುಳ್ಳುಕಂಟಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿ ಸುತ್ತಿದ್ದುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.