ADVERTISEMENT

ಮಕ್ಕಳೊಂದಿಗೆ ಪಾಲಕರ ಪ್ರತಿಭಟನೆ

ವಾರದಿಂದ ಶಾಲೆಯಲ್ಲಿ ಬಿಸಿಯೂಟ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 7:01 IST
Last Updated 4 ಜುಲೈ 2013, 7:01 IST

ಗಂಗಾವತಿ: ಒಂದುವಾರದಿಂದ ಬಿಸಿಯೂಟ ನೀಡುತ್ತಿಲ್ಲ ಎಂದು ಆರೋಪಿಸಿ ಮಕ್ಕಳೊಂದಿಗೆ ಪಾಲಕರು ಶಾಲಾ ಆವರಣದಲ್ಲಿ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ನಗರದ 6ನೇ ವಾರ್ಡ್ ಮಹೆಬೂಬ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆಯಿತು.

ಬೆಳಿಗ್ಗೆ 10ಕ್ಕೆ ಶಾಲೆ ಆರಂಭವಾಗುತ್ತಿದ್ದಂತೆಯೆ ತರಗತಿಗಳಿಂದ ಹೊರ ಬಂದ ಮಕ್ಕಳು ಶಿಕ್ಷಕರ ವಿರುದ್ಧ ಘೋಷಣೆ ಕೂಗುತ್ತಾ ಶಾಲಾ ಆವರಣಕ್ಕೆ ಬಂದರು. ವಾರ್ಡಿನ ಕೆಲ ಯುವಕರು ಸ್ಥಳಕ್ಕೆ ಬಂದು ಮಕ್ಕಳಿಂದ ಮಾಹಿತಿ ಪಡೆದರು.

ಕೂಡಲೆ ಧರಣಿಗೆ ಕುಳಿತರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಕ್ಕಳ ಪಾಲಕರೂ ಪ್ರತಿಭಟನೆಗೆ ಮುಂದಾರು. ಶಾಲೆಯ ಕೊಠಡಿಯೊಂದಕ್ಕೆ ಬೀಗ ಹಾಕಿದ ಯುವಕರು, ಕೊಠಡಿ ಎದುರೇ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಮುಖ್ಯಗುರು ಗೈರು: ಶಾಲೆಯ ಮುಖ್ಯಗುರು ಸಾರಾ ಪ್ರೇಮಲತಾ ಸೋಮವಾರ ಕರ್ತವ್ಯಕ್ಕೆ ರಜೆ ಹಾಕಿ ಗೈರು ಹಾಜರಾಗಿದ್ದದ್ದು ಪ್ರತಿಭಟನೆಕಾರರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಧರಣಿಗೆ ಶಾಲೆಯಲ್ಲಿನ ಶಿಕ್ಷಕರು ಸ್ಪಂದಿಸುವ ಗೋಜಿಗೆ ಹೋಗಲಿಲ್ಲ.

`ಕಳೆದ ನಾಲ್ಕು ದಿನಗಳಿಂದ ಮುಖ್ಯಗುರು ಸೇರಿದಂತೆ ಶಾಲೆಯ ಯಾವೊಬ್ಬ ಶಿಕ್ಷಕರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಹೀಗಾಗಿ ಬಿಸಿಯೂಟದ ಸಮಸ್ಯೆ ಉಲ್ಬಣಿಸಿದೆ' ಎಂದು ಪಾಲಕರಾದ ಖಾಜಬೀ, ಹುಸೇನಮ್ಮ, ಮೆಹರೂನಬೀ ದೂರಿದರು.

`ಬಿಸಿಯೂಟ ಸ್ಥಗಿತವಾಗಿದ್ದರಿಂದ ಮಕ್ಕಳು ಪರದಾಡುವಂತಾಗಿದೆ. ಈ ಬಗ್ಗೆ ಕೇಳಿದರೆ, ಅಕ್ಕಿ, ಬೇಳೆ, ಮಸಾಲೆ ಸಾಮಾಗ್ರಿ ಬಂದಿಲ್ಲ ಬಂದಿಲ್ಲ ಎಂದು ನೆಪ ಹೇಳಲಾಗುತ್ತಿದೆ' ಎಂದು ಯುವಕರಾದ ಯಲ್ಲಪ್ಪ, ಚನ್ನಬಸವ, ಪೀರಮ್ಮ, ರತ್ನಮ್ಮ, ಸಲೀಮಾ ಮೊದಲಾದವರು ದೂರಿದರು.
`ವಾರ್ಡಿನ ಶಾಲೆಯಲ್ಲಿ ನಡೆದ ವಿದ್ಯಮಾನ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಕ್ಷಣ ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ' ಎಂದು ವಾರ್ಡಿನ ನಗರಸಭಾ ಸದಸ್ಯ ಕಮ್ಲಿಬಾಬಾ ಹೇಳಿದರು.

ನವೋದಯಕ್ಕೆ ಆಯ್ಕೆ
ಗಂಗಾವತಿ: ನಗರದ ಚನ್ನಬಸವಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 6ನೇ ವರ್ಗದ ವಿದ್ಯಾರ್ಥಿ ಮಂಜುನಾಥ ಪೋತಾರದ, ಸೋಮವಾರ ಪ್ರಕಟಗೊಂಡ ನವೋದಯ ಫಲಿತಾಂಶದಲ್ಲಿ ಉತ್ತೀರ್ಣನಾಗಿದ್ದಾನೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.