ADVERTISEMENT

ಮತದಾನ ಬಹಿಷ್ಕಾರ: ಯಲಬುರ್ತಿ ಗ್ರಾಮಸ್ಥರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 8:29 IST
Last Updated 11 ಮಾರ್ಚ್ 2014, 8:29 IST

ಕುಷ್ಟಗಿ: ಮುಖ್ಯರಸ್ತೆಯಿಂದ ತಾಲ್ಲೂ­ಕಿನ ಯಲಬುರ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಹಾಳಾಗಿ ಹಳ್ಳ­ದಂತಾಗಿ ಜನ ಸಂಪರ್ಕ ರಸ್ತೆ­ಯಿಂದ ವಂಚಿತರಾಗಿರುವುದು ಕಂಡುಬಂದಿದೆ.

ದಾರಿಯೇ ಇಲ್ಲದ ಊರಿಗೆ ಹೆಣ್ಣು ಕೊಡಲು ಮನಸ್ಸು ಮಾಡುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸದ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸರವಾಗಿದೆ. ಹಾಗಾಗಿ ಯಾರು ಏನೇ ಹೇಳಿದರೂ ಲೋಕಸಭೆ ಚುನಾವಣೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ.

ಕೊರಡಕೇರಾ ಬಳಿ ಇರುವ ರಾಜ್ಯ ಹೆದ್ದಾರಿಯಿಂದ ಈ ಗ್ರಾಮಕ್ಕೆ ಬರ ಹೋಗಬೇಕಾದರೆ ಈ ರಸ್ತೆಯನ್ನೇ ಬಳಸಬೇಕು. ಒಂದು ವರ್ಷದ ಹಿಂದೆ ಸುರಿದ ಮಳೆಗೆ ರಸ್ತೆ ಅಕ್ಕಪಕ್ಕದಲ್ಲಿ ಕೊಚ್ಚಿಹೋಗಿದ್ದು, ದ್ವಿಚಕ್ರ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಸಾರಿಗೆ ಬಸ್‌ ಸಂಪರ್ಕ ಇಲ್ಲದಂತಾಗಿದೆ. ಎತ್ತಿನಗಾಡಿಗಳು ಹೋಗದ ಕಾರಣ ರೈತರು ತೊಂದರೆಗೊಳಗಾಗಿದ್ದಾರೆ. ಮುಖ್ಯರಸ್ತೆ ತಲುಪಬೇಕಾದರೆ 3ಕಿ.ಮೀ. ಕಾಲ್ನಡಿಗೆಯಲ್ಲಿಯೇ ಹೋಗಬೇಕು. ರಾತ್ರಿ ವೇಳೆ ಜನರಿಗೆ, ಗರ್ಭಿಣಿ, ಬಾಣಂತಿಯರಿಗೆ ಹೆಚ್ಚು–ಕಡಿಮೆಯಾದರೆ ದೇವರೇ ಕಾಪಾಡಬೇಕು. ವರ್ಷದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಊರಿನ ಸುತ್ತ ನಾಲ್ಕು ರಸ್ತೆಗಳಿದ್ದೂ ಇಲ್ಲದಂತಾಗಿದೆ. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದವರೇ ಆದ ತಾ.ಪಂ. ಉಪಾಧ್ಯಕ್ಷೆ ನಿಂಗಮ್ಮ ಮಾಲಿಪಾಟೀಲ ಅಸಹಾಕತೆ ವ್ಯಕ್ತಪಡಿಸಿದರು.

ಸಂಪರ್ಕ ಇಲ್ಲದ್ದಕ್ಕೆ ನಮ್ಮೂರಿನ ಹುಡುಗರಿಗೆ ಹೆಣ್ಣು ಕೊಡಲು  ಪರಸ್ಥಳದವರು ಮುಂದೆಬರುತ್ತಿಲ್ಲ. 3ಕಿ.ಮೀ. ದೂರದಲ್ಲಿ ಶಾಸಕ ಇದ್ದರೆ, 2 ಕಿ.ಮೀ. ದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಿದ್ದಾರೆ. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರು ಇದೇ ಊರಿನವರು ಆದರೂ ರಸ್ತೆಗೆ ದುರಸ್ತಿ ಭಾಗ್ಯ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದರು.

ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮುಖಂಡ ಜಗ್ಗನಗೌಡ ಮಾಲಿಪಾಟೀಲ, ಜನರಿಗೆ ಒಂದು ಸುರಕ್ಷಿತ ರಸ್ತೆ ಇಲ್ಲವೆಂದರೆ ನಮ್ಮ ಪಾಲಿಗೆ ಪ್ರತಿನಿಧಿಗಳು, ಸರ್ಕಾರ ಯಾರೂ ಇಲ್ಲದಂತಾಗಿದೆ. ಜನರ ನೋವಿಗೆ ಧ್ವನಿಯಾಗದ ಪ್ರತಿನಿಧಿಗಳು ಇದ್ದರೆಷ್ಟು ಬಿಟ್ಟರೆಷ್ಟು? ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯ ಉಸಾಬರಿಯೇ ನಮಗೆ ಬೇಡ. ನಾವು ಮತದಾನ ಬಹಿಷ್ಕರಿಸುತ್ತೇವೆ. ಅಷ್ಟೇ ಅಲ್ಲ ಯಾವುದೇ ರಾಜಕೀಯ ಪಕ್ಷದವರನ್ನು ಊರೊಳಗೆ ಕಾಲಿಡದಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.