ADVERTISEMENT

‘ಮತದಾನ ಮಾಡದವರಿಗೆ ಆರೋಪ ಮಾಡುವ ನೈತಿಕತೆ ಇರುವುದಿಲ್ಲ’

‘ಓಟರ್‍ಗ್ರಾಮ್’ ವಿಶಿಷ್ಟ ಸೆಲ್ಫಿ ಸ್ಪಾಟ್‍ಗೆ ಚಾಲನೆ, ಮತದಾನ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 9:45 IST
Last Updated 12 ಏಪ್ರಿಲ್ 2018, 9:45 IST

ಕೊಪ್ಪಳ: 'ಮತದಾನ ಮಾಡದವರಿಗೆ ಯಾವುದೇ ಜನಪ್ರತಿನಿಧಿಗಳಿಗೆ ಸೌಲಭ್ಯ ಕೇಳುವ, ಆರೋಪಿಸುವ ಅಥವಾ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲದಂತಾಗುತ್ತದೆ' ಎಂದು ಜಿಲ್ಲಾಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷ ವೆಂಕಟರಾಜಾ ಹೇಳಿದರು.‌

ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮ ಅಡಿ ‘ಓಟರ್‍ಗ್ರಾಮ್’ ವಿಶಿಷ್ಟ ಸೆಲ್ಫಿ ಸ್ಪಾಟ್‍ಗೆ ಚಾಲನೆ ಹಾಗೂ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತದಾನ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರಜೆಗಳೇ ಪ್ರಭುಗಳು, ಪ್ರಜೆಗಳು ಪ್ರತಿನಿಧಿಗಳನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಮಹತ್ತರ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬ ಮತದಾರನ ಮೇಲಿದೆ. ಈ ಜವಾಬ್ದಾರಿಯ ಮಹತ್ವ ಅರಿತು ಎಲ್ಲ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸಬೇಕು. ಮತದಾರ ಎನಿಸಿಕೊಂಡವರು ತಮ್ಮ ಹೊಣೆಗಾರಿಕೆ ಮರೆತಲ್ಲಿ ಅಂತಹ ವ್ಯಕ್ತಿ ಯಾವುದೇ ಸೌಲಭ್ಯ ಕೇಳುವುದು ಅಥವಾ ಆರೋಪಿಸುವ ನೈತಿಕತೆಯನ್ನು ಕಳೆದುಕೊಂಡಂತಾಗುತ್ತದೆ' ಎಂದರು.

ADVERTISEMENT

'ಪ್ರತಿಯೊಂದು ಮತವೂ, ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ. ಅಂತಹ ಅಮೂಲ್ಯವಾದ ಮತವನ್ನು ಹಣದ ಆಸೆಗೆ ಅಥವಾ ಇತರ ಯಾವುದೇ ಆಮಿಷಕ್ಕೆ ಮಾರಿಕೊಂಡಲ್ಲಿ, ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಮಾರಕವಾಗಲಿದೆ. ಪ್ರತಿಯೊಬ್ಬ ಮತದಾರನ ಮತದಾನದ ನಿರ್ಧಾರ, ಇಡೀ ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರಾಮಾಣಿಕ ರಲ್ಲದವರನ್ನು ಆರಿಸಿದಲ್ಲಿ, ಭ್ರಷ್ಠಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಪ್ರಾಮಾಣಿಕರನ್ನೇ ಆರಿಸಲು, ಯೋಚಿಸಿ, ಸೂಕ್ತರಿಗೆ ತಪ್ಪದೆ ಮತ ಚಲಾಯಿಸಿ. ನಿಮ್ಮ ಕರ್ತವ್ಯ ಪಾಲಿಸಬೇಕು’ ಎಂದರು.

'ನಮ್ಮ ಒಂದು ಮತ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಮನಗಾಣಬೇಕು. ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಭಾರತ. ಮತದಾನ ಹಕ್ಕು ಚಲಾಯಿಸುವುದು ಎಲ್ಲರ ಕರ್ತವ್ಯ. ಕ್ಯಾಲೆಂಡರ್‌ನಲ್ಲಿ ಅನೇಕ ರಜೆಗಳು ಬಂದು ಹೋಗುತ್ತವೆ. ಆದರೆ ಮತ ಚಲಾಯಿಸುವ ಹಕ್ಕು, ಪದೇ ಪದೇ ದೊರೆಯುವುದಿಲ್ಲ' ಎಂದರು.

ಇವಿಎಂ ಹಾಗೂ ವಿವಿ ಪ್ಯಾಟ್ ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ ವಿಜಯಕುಮಾರ್ ಮತದಾನ ಯಂತ್ರ ಹಾಗೂ ವಿವಿ ಪ್ಯಾಟ್ ಕಾರ್ಯ ವೈಖರಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಕಿಮ್ಸ್ ನಿರ್ದೇಶಕ ಡಾ.ಶಂಕರ್ ಮಲಪುರೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರೆಡ್ಡಿ ಅವರು ಇದ್ದರು.

**

ಒಂದು ಮತದಿಂದ ಏನಾಗಬಲ್ಲದು ಎಂಬ ತಾತ್ಸಾರ ಮನೋಭಾವ ತೋರುವುದು ಸರಿಯಲ್ಲ. ಅನೇಕ ಚುನಾವಣೆಗಳಲ್ಲಿ   ಕೇವಲ ಒಂದು ಮತಗಳ ಅಂತರದಲ್ಲಿ ಅಭ್ಯರ್ಥಿಗಳು ಸೋಲು-ಗೆಲುವು ಅನುಭವಿಸಿದ್ದಾರೆ – ವೆಂಕಟರಾಜಾ, ಅಧ್ಯಕ್ಷ, ಜಿಲ್ಲಾಮಟ್ಟದ ಸ್ವೀಪ್‌ ಸಮಿತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.