ADVERTISEMENT

ಮತದಾರರ ಜಾಗೃತಿ ಅಭಿಯಾನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 11:01 IST
Last Updated 21 ಮಾರ್ಚ್ 2014, 11:01 IST

ಕೊಪ್ಪಳ: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಅಭಿಯಾನವನ್ನು ಮಾರ್ಚ್‌ 21ರಿಂದ ಹಮ್ಮಿಕೊಳ್ಳಲಾಗಿದ್ದು. ಅಂದು ಸಂಜೆ 7ಕ್ಕೆ ಸಾಹಿತ್ಯ ಭವನದ ಮುಂಭಾಗ ಮೋಂಬತ್ತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್‌ ಗುರುವಾರ ತಿಳಿಸಿದರು.

ಮತದಾರರ ಜಾಗೃತಿ ಸಂಬಂಧಿಸಿ ಪ್ರಚಾರ ಪತ್ರಗಳನ್ನು ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಅವರು, ಮತದಾರ­ರಿಗೆ ವ್ಯವಸ್ಥಿತ ಶಿಕ್ಷಣ, ಸಹಭಾಗಿತ್ವ ಮತ್ತು ಮತ­ದಾನದಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರ­ಮದಡಿ ಮತದಾರರನ್ನು ಮತದಾನಕ್ಕೆ ಉತ್ತೇಜನ­ಗೊಳಿ­ಸುವುದು, ಎಲ್ಲ ಮತದಾ­ರರು ಕಡ್ಡಾಯವಾಗಿ ಮತದಾನ ಮಾಡು­ವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳ­ಲಾಗಿದೆ ಎಂದರು.

ವಿವಿಧ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ­ಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.


ಜಿಲ್ಲೆಯಲ್ಲಿ 9,56,766 ಮತದಾರರು ಇದ್ದಾರೆ. ಹೊಸದಾಗಿ ಸೇರ್ಪಡೆಗೆ 17,623 ಅರ್ಜಿಗಳು ಬಂದಿವೆ. ಎಲ್ಲವನ್ನೂ ಒಂದೆರಡು ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.

15 ಸ್ಥಿರ ನಿಗಾ ತಂಡದವರು ಚೆಕ್‌ಪೋಸ್ಟ್‌­ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ಇದುವರೆಗೆ ₨ 11.50 ಲಕ್ಷ  ಹಣ ಸಿಕ್ಕಿದೆ. ಹೈ–ಕ ಭಾಗದಲ್ಲಿ ಇದುರೆಗೆ ಪತ್ತೆಯಾದ ದೊಡ್ಡ ಮೊತ್ತ ಎಂದು ಅವರು ವಿವರಿಸಿದರು. ಚೆಕ್‌ ಪೋಸ್ಟ್‌ಗಳಲ್ಲಿ ಇದುವರೆಗೆ ಅಬಕಾರಿ ಇಲಾಖೆಯವರು 16, ಪೊಲೀಸರು 1 ಪ್ರಕರಣವನ್ನು ದಾಖಲಿಸಿ­ದ್ದಾರೆ ಎಂದು ಅವರು ನುಡಿದರು.

ಸಾಮೂಹಿಕ ವಿವಾಹ ನಿಷೇಧ: ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ಯಾವುದೇ ಸಾಮೂಹಿಕ ವಿವಾಹಕ್ಕೆ ಅನುಮತಿ ನೀಡುವುದಿಲ್ಲ. ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರೋಹಿಣಿ ಸೆಪಟ್‌, ಚುನಾವಣಾ ವೆಚ್ಚದ ವೀಕ್ಷಕ ಮೈಕೆಲ್‌ ಜೆರಾಲ್ಡ್‌, ಜಿ.ಪಂ. ಸಿಇಒ ಕೃಷ್ಣ ಡಿ. ಉದುಪುಡಿ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT