ADVERTISEMENT

ಮತಪಟ್ಟಿಯಿಂದ ಹೆಸರು ನಾಪತ್ತೆ!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:45 IST
Last Updated 3 ಏಪ್ರಿಲ್ 2013, 6:45 IST
ಮತಪಟ್ಟಿಯಿಂದ ಹೆಸರು ನಾಪತ್ತೆ!
ಮತಪಟ್ಟಿಯಿಂದ ಹೆಸರು ನಾಪತ್ತೆ!   

ಕಾರಟಗಿ: ಬರುವ ವಿಧಾನಸಭಾ ಚುನಾವಣೆಗಳನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿಗಳು ಅನೇಕ ಕ್ರಮ ಕೈಗೊಂಡು, ಹಲವು ತಂಡಗಳನ್ನು ರಚಿಸಿದ್ದಾರೆ. ಇನ್ನೊಂದೆಡೆ ಪವಿತ್ರ ಮತವನ್ನು ಎಲ್ಲರೂ ಚಲಾಯಿಸಬೇಕು. 

ಮತದಾನ ಮಾಡುವಂತೆ ಅನೇಕ ಜಾಗೃತಿ  ಮೂಡಿಸುವ ಕಾರ್ಯಕ್ರಮ, ಅಭಿಯಾನ ಮಾಡುವ ಸಿದ್ಧತೆಯೂ ನಡೆದಿದೆ. ಇದರ ಮಧ್ಯೆ ಮತ್ತೊಂದೆಡೆ ಮತದಾನ ಮಾಡಲು ಸಿದ್ಧರಿರುವ ಪ್ರಜ್ಞಾವಂತ ಮತದಾರರ ಹೆಸರುಗಳು ಮತದಾರರ ಯಾದಿಯಿಂದ ನಾಪತ್ತೆಯಾಗಿರುವ ಸಂಗತಿ ಬಹಿರಂಗವಾಗಿದೆ.

ಮತದಾರರ ಗುರುತಿನ ಕಾರ್ಡ್ ಇದ್ದರೂ ಒಂದೇ ಕುಟುಂಬಕ್ಕೆ ಸೇರಿದ ಏಳು ಸದಸ್ಯರ ಹೆಸರುಗಳು ಮತದಾರರ ಯಾದಿಯಿಂದ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮತದಾರರ ಯಾದಿಯಲ್ಲಿ ಹೆಸರು ಕೈಬಿಡಲು ಕಾರಣ ನಿಗೂಢವಾಗಿದೆ, ದುರುದ್ದೇಶವೂ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಬಗೆಗೆ ತನಿಖೆ ಆಗಬೇಕು ಎಂಬ ಒತ್ತಾಯ ಕುಟುಂಬ ವರ್ಗದ್ದಾಗಿದೆ.

10ನೇ ವಾರ್ಡ್‌ನ ನಿವಾಸಿಗಳಾದ (ಮನೆ ಸಂಖ್ಯೆ: 297/ಎ) ಬಿ. ಅನಂತರಾವ್ ಇವರ ಪತ್ನಿ ಭಾಗಿರಥಿಭಾಯಿ, ಇವರ ಪುತ್ರರಾದ ಬಿ. ಸತ್ಯನಾರಾಯಣ, ಬಿ. ನರಸಿಂಹಮೂರ್ತಿ, ಬಿ. ಗಿರೀಶ್, ಇವರ ಸೊಸೆ ಶ್ರೀಗೌರಿ ಹಾಗೂ ಸೋದರ ಸಂಬಂಧಿ ಪವನಕುಮಾರ್ ಎಂಬುವವರ 7 ಹೆಸರುಗಳು ಮತದಾರರ ಯಾದಿಯಿಂದ ನಾಪತ್ತೆಯಾಗಿವೆ (ರದ್ದಾದ ಯಾದಿಯಲ್ಲಿಯ ಕ್ರಮ ಸಂಖ್ಯೆ 980ರಿಂದ 985 ಹಾಗೂ 783)
ಇವರೆಲ್ಲರೂ ಕಳೆದ ಐದು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.
ಮನೆಯಲ್ಲಿ ಕುಟುಂಬ ಸದಸ್ಯರು ವಾಸವಾಗಿದ್ದಾರೆ.

ಬಿ. ಸತ್ಯನಾರಾಯಣ ಇವರ ಪತ್ನಿ ನ್ಯಾಯವಾದಿ ಶ್ರೀಗೌರಿ ಹೆಸರು ನಾಪತ್ತೆಯಾಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಂಪ್ಯೂಟರ್, ಆನ್‌ಲೈನ್ ಬಳಕೆಯ ಮಾಹಿತಿ ಇರುವ ನಾವು ಸುಮ್ಮನೆ ನೋಡಲು ಹೋದಾಗ ನಮ್ಮ ಕುಟುಂಬದವರ ಹೆಸರು ನಾಪತ್ತೆಯಾಗಿರುವುದು ನೋಡಿ ಗಾಬರಿಯಾಯಿತು.

ಈ ನಾಪತ್ತೆಯ ಹಿಂದೆ ದುರುದ್ದೇಶವಿದೆ, ಕಾಣದ ಕೈ ಕೆಲಸ ಮಾಡಿದೆ. ಸಂಬಂಧಿಸಿದವರು ತಮ್ಮ ಜವಬ್ದಾರಿತನ ಮರೆತು ಕಾರ್ಯನಿರ್ವಹಿಸಿದ್ದಾರೆ. ಇದರ ಬಗ್ಗೆ ವಿಚಾರಣೆ ನಡೆಯಬೇಕು. ಸಂಬಂಧಿಸಿದವರಿಗೆ ತಕ್ಕ ಶಾಸ್ತಿ ಆಗಬೇಕು. ಅದರಿಂದ ಇತರರಿಗೆ ಪಾಠ ಕಲಿಸಿದಂತಾಗಬೇಕು ಎಂದರು.

ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಇದಾಗಿದೆ. ಜಿಲ್ಲಾಡಳಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದವರು ಆಗ್ರಹಿಸಿದರು.
ನಮ್ಮ ಸುದ್ದಿ ತಿಳಿದ ಅನೇಕರು ನಮ್ಮ ಹೆಸರೂ ನಾಪತ್ತೆಯಾಗಿದೆ ಎಂದು ಕೆಲವರು ಗೋಳು ತೋಡಿಕೊಂಡರು. ಮತದಾರರ ಯಾದಿಯ ಸಮಗ್ರ ಪರಿಶೀಲನೆ ನಡೆಯಬೇಕು.

ಯಾದಿಯಿಂದ ಕೈಬಿಟ್ಟಿರುವ ಹೆಸರುಗಳನ್ನು ತಕ್ಷಣ ಸೇರ್ಪಡೆ ಮಾಡುವ ಕಾರ್ಯ ನಡೆಯಬೇಕು. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಿ. ಅನಂತರಾವ್ ಕುಟುಂಬದವರು ಆಗ್ರಹಿಸಿದರು.

ಜಿಲ್ಲಾಡಳಿತ ಇದರ ವಿಚಾರಣೆಗೆ ಮುಂದಾಗಿ ಪವಿತ್ರ ಮತ ಚಲಾಯಿಸಲು ಮತದಾರರಿಗೆ ಅನುಕೂಲ ಮಾಡಲು ಮುಂದಾಗುವುದೇ? ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.