ADVERTISEMENT

ಮರಳು ಸಾಗಾಟ: ಅನುಮತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 8:50 IST
Last Updated 16 ಏಪ್ರಿಲ್ 2011, 8:50 IST
ಮರಳು ಸಾಗಾಟ: ಅನುಮತಿಗೆ ಆಗ್ರಹ
ಮರಳು ಸಾಗಾಟ: ಅನುಮತಿಗೆ ಆಗ್ರಹ   

ಕೊಪ್ಪಳ: ಮರಳು ಸಾಗಾಟ ಮಾಡಲು ತಾತ್ಕಾಲಿಕವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಶ್ರೀಅಭಿನವ ಗವಿಸಿದ್ಧೇಶ್ವರ ಟ್ರ್ಯಾಕ್ಟರ್ ಮಾಲೀಕರು, ಚಾಲಕರು ಹಾಗೂ ಕೂಲಿಕಾರ್ಮಿಕರ (ರೈತಾಪಿ ವರ್ಗ) ಸಂಘದ ಸದಸ್ಯರು ಶುಕ್ರವಾರ ಧರಣಿ ನಡೆಸಿದರು.

ಜಿಲ್ಲಾಡಳಿತ ಕಚೇರಿಗೆ ಟ್ರ್ಯಾಕ್ಟರ್‌ಗಳೊಂದಿಗೆ ಆಗಮಿಸಿದ ಪ್ರತಿಭಟನಾಕಾರರು, ಮರಳು ಸಾಗಾಟಕ್ಕೆ ಟೆಂಡರ್ ಕರೆಯುವ ತನಕ ಟ್ರಿಪ್‌ಶೀಟ್‌ಗಳ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮರಳು ಸಾಗಾಟಕ್ಕೆ ನೀಡಿದ್ದ ಪರವಾನಿಗೆ ಅವಧಿ ಮುಗಿದಿದೆ. ಅಲ್ಲದೇ, ಹೊಸದಾಗಿ ಪರವಾನಗಿ ನೀಡಲು ಇನ್ನೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೆಲಸವಿಲ್ಲದೇ ಬದುಕುವುದು ಕಷ್ಟ. ಇನ್ನೊಂದೆಡೆ ಸಾಲ ಮಾಡಿ ಖರೀದಿ ಮಾಡಿರುವ ಟ್ರ್ಯಾಕ್ಟರ್‌ಗಳ ಕಂತಿನ ಹಣ ತುಂಬುವುದು ಸಹ ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ಅವಲತ್ತುಕೊಂಡರು.

ಟ್ರ್ಯಾಕ್ಟರ್ ಓಡಿಸುವ ಬಹುತೇಕ ಚಾಲಕರು ಅನಕ್ಷರಸ್ಥರು. ಆದರೆ, ಅವರಲ್ಲಿ ಚಾಲನಾ ಪರವಾನಗಿ ಇಲ್ಲದಿರುವುದರಿಂದ ಅವರಿಗೆ ವಾಹನ ಓಡಿಸಲು ಅವಕಾಶ ನೀಡುತ್ತಿಲ್ಲ. ಸಮರ್ಪಕವಾಗಿ ವಾಹನ ಚಾಲನೆ ಮಾಡಲು ಬರುವವರಿಗೆ ಕೂಡಲೇ ಪರವಾನಗಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದೂ ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಬಿ.ಪಿ.ಅಡ್ನೂರ್, ಸಹಾಯಕ ಆಯುಕ್ತ ಎಂ.ಶರಣಬಸಪ್ಪ ಮನವಿಪತ್ರ ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗೋವಿಂದ, ಶೇಖರಗೌಡ, ಮಂಜುನಾಥ, ಗಿರೀಶ್ ನಾಯಕ, ತೇಜಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.