ADVERTISEMENT

ಮರುಕಳಿಸಿದ ಇತಿಹಾಸ; ಬಿಜೆಪಿಗೆ ಆಘಾತ

ಕುಷ್ಟಗಿ: ಗೆಲುವಿನ ಅಂತರದಲ್ಲೂ ಹೊಸ ದಾಖಲೆ ಬರೆದ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 16 ಮೇ 2018, 13:12 IST
Last Updated 16 ಮೇ 2018, 13:12 IST

ಕುಷ್ಟಗಿ: ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ಗೆಲುವಿನ ನಗೆ ಬೀರುತ್ತಿದ್ದಂತೆ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಭಾರಿ ವಿಜಯೋತ್ಸವ ಆಚರಿಸಿದರು.

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಕ್ಷದ ಧ್ವಜ ಕಟ್ಟಿಕೊಂಡು ನೂರಾರು ಕಾರ್ಯಕರ್ತರು ಪಟ್ಟಣದ ತುಂಬೆಲ್ಲ ಬೈಕ್‌ ರ‍್ಯಾಲಿ ನಡೆಸಿ ಸಂಭ್ರಮಿಸಿದರು. ಕೆಲ ಕಾರ್ಯಕರ್ತರು ಬಸವೇಶ್ವರ ವೃತ್ತದ ಸುತ್ತಲೂ ಸುಣ್ಣದ ನೀರು ಸುರಿದು ಬಿಜೆಪಿ ಅಭ್ಯರ್ಥಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಅಮರೇಗೌಡ ಬಯ್ಯಾಪುರ ಪಟ್ಟಣಕ್ಕೆ ಬರುತ್ತಿದ್ದಂತೆ ಅವರ ನಿವಾಸದ ಆವರಣದಲ್ಲಿ ಸಹಸ್ರ ಸಂಖ್ಯೆ ಬೆಂಬಲಿಗರು ಜಮಾಯಿಸಿದ್ದರಿಂದ ನುಗ್ಗಲು ಉಂಟಾಯಿತು. ಅಭಿಮಾನಿಗಳು ಬಯ್ಯಾಪುರ ಅವರಿಗೆ ಸಿಹಿ ತಿನ್ನಿಸಿ ಹಾರ ತುರಾಯಿ ನೀಡುವ ಮೂಲಕ ಅಭಿನಂದಿಸಿದರು. ನಂತರ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಯ್ಯಾಪುರ ರೋಡ್‌ ಷೋ ನಡೆಸಿದರು. ಪಕ್ಷದ ಪ್ರಮುಖರು, ಕಾರ್ಯಕರ್ತರು ಬೆಂಬಲಿಗರು ಇದ್ದರು. ಹುಚ್ಚೆದ್ದು ಕುಣಿಯುತ್ತಿದ್ದ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಬೇಕಾಯಿತು.

ADVERTISEMENT

ಮರುಕಳಿಸಿದ ಇತಿಹಾಸ: ಸತತ ಗೆಲುವು ಅಸಾಧ್ಯ ಎಂಬ ಇತಿಹಾಸವನ್ನು ಈ ಕ್ಷೇತ್ರದ ಜನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಹಿಂದಿನ ಚುನಾವಣೆ ಯಲ್ಲಿ ಗೆಲುವು ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಅಮರೇಗೌಡ ಬಯ್ಯಾಪುರ ಆಗ ಸೋಲಿಗೆ ಶರಣಾಗಿದ್ದರು. ಈ ಬಾರಿ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದಾಗಿ ಹೇಳುತ್ತ ಬಂದ ಬಿಜೆಪಿಯ ನಿಕಟಪೂರ್ವ ಶಾಸಕ ದೊಡ್ಡನಗೌಡ ಪಾಟೀಲ ಪರಾಭವಗೊಂಡಿದ್ದಾರೆ.

ಅಸಾಧಾರಣ ಗೆಲುವು: ಕಳೆದ ಚುನಾವಣೆಯಲ್ಲಿ ಅಂದಾಜು ಮೂರು ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದ ಬಯ್ಯಾಪುರ ಈ ಬಾರಿ ಐದರಿಂದ ಎಂಟು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ನಿರೀಕ್ಷೆಗೂ ಮೀರಿ 18,031 ಮತಗಳ ಅಂತರದ ಗೆಲುವು ಸಾಧಿಸಿದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆ ಬಯ್ಯಾಪುರ ಅವರದ್ದಾಗಿದ್ದರೆ ಈ ಫಲಿತಾಂಶ ಬಿಜೆಪಿಗೆ ಭಾರಿ ಆಘಾತ ತಂದಿದೆ.

ಪ್ರತಿಕ್ರಿಯೆಗೆ ಬಿಜೆಪಿ ನಕಾರ: ಬಿಜೆಪಿ ಅಭ್ಯರ್ಥಿಯಾಗಿದ್ದ ದೊಡ್ಡನಗೌಡ ಪಾಟೀಲ ಸೋಲಿನ ಆಘಾತದಿಂದ ಹೊರಬಂದಿಲ್ಲ. ಹಾಗಾಗಿ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ದೊಡ್ಡನಗೌಡ ಪಾಟೀಲ ಅವರ ಮೊಬೈಲ್‌ ದೂರವಾಣಿ ವ್ಯಾಪ್ತಿ ಪ್ರದೇಶದಿಂದ ಹೊರಗಿತ್ತು. ಅವರ ಪಕ್ಕದಲ್ಲಿಯೇ ಇದ್ದ ಬಿಜೆಪಿ ಪ್ರಮುಖರಿಗೆ ಕರೆ ಮಾಡಿದರೆ 'ಸದ್ಯ ಅವರು ಯಾವುದೇ ಹೇಳಿಕೆ ನೀಡುವುದಿಲ್ಲ ನಂತರ ಮಾತನಾಡುತ್ತಾರೆ' ಎಂದೆ ಹೇಳಿ ಕರೆ ಸ್ಥಗಿತಗೊಳಿಸಿದರು.

‘ಬಹುಸಂಖ್ಯಾತರನ್ನೂ ಸೋಲಿಸುವ ಶಕ್ತಿ ಜನರಿಗಿದೆ’

ಕುಷ್ಟಗಿ: ’ಕ್ಷೇತ್ರದ ಹಿರಿಯರು, ಕಾರ್ಯಕರ್ತರ ಶ್ರಮದಿಂದ ಈ ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿದ್ದು, ಅಭಿವೃದ್ಧಿ ಕೆಲಸಗಳ ಮೂಲಕ ಕ್ಷೇತ್ರದ ಜನರ ಋಣ ತೀರಿ ಸುವ ಅವಕಾಶ ಮತ್ತೊಮ್ಮೆ ತಮಗೆ ದೊರೆತಿದೆ’ ಎಂದು ನೂತನ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಫಲಿತಾಂಶ ಕುರಿತು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2013ರ ಚುನಾವಣೆಯಲ್ಲಿ ತಾಂತ್ರಿಕವಾಗಿ ತಾವು ಸೋತಿದ್ದರೂ ಜನ 41,000 ಮತಗಳನ್ನು ನೀಡಿದ್ದರಿಂದ ಸೋಲು ಅನುಭವಕ್ಕೇ ಬಂದಿರಲಿಲ್ಲ. ಸೋತರೂ ಐದು ವರ್ಷಗಳವರೆಗೆ ಸತತ ಜನರೊಂದಿಗೆ ಭಾವನಾತ್ಮಕವಾಗಿ ಬೆರೆತು ಜನರ ಋಣ ಸಂದಾಯ ಮಾಡಲು ಪ್ರಯತ್ನಿಸುತ್ತ ಬಂದುದರ ಫಲವಾಗಿ ಈಗ ಗೆಲುವು ಸಾಧ್ಯವಾಗಿದೆ. ಎರಡೂ ಅವಧಿಯ ಚುನಾವಣೆಯಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿದ್ದೇನೆ’ ಎಂದರು.

’ಅಲ್ಪಸಂಖ್ಯಾತ ಸಮುದಾಯದವರನ್ನೂ ಗೆಲ್ಲಿಸುವ ಮತ್ತು ಬಹುಸಂಖ್ಯಾತರನ್ನು ಸೋಲಿಸುವ ಶಕ್ತಿ ಈ ಕ್ಷೇತ್ರದ ಜನರಿಗೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಬೆಂಬಲಿಗರು ಕೇವಲ ಶೇ 20ರಷ್ಟಿದ್ದಾರೆ ಆದರೆ, ಶೇ 60ರಷ್ಟಿರುವ ಬುದ್ಧಿಜೀವ ಮತದಾರರು ಹೆಚ್ಚಿನ ರೀತಿಯಲ್ಲಿ ಮತದಾನ ಮಾಡಿ ಬೆಂಬಲಿಸುವ ತೀರ್ಮಾನ ಮಾಡಿದ್ದರಿಂದ ತಾವು ಎರಡನೇ ಬಾರಿ ಈ ಕ್ಷೇತ್ರದ ಶಾಸಕನಾಗಲು ಅನುಕೂಲವಾಯಿತು. ವೈಯಕ್ತಿಕ ವರ್ಚಸ್ಸು, ಜನರೊಂದಿಗಿನ ಸ್ಪಂದನೆ ಜೊತೆಗೆ ಪಕ್ಷದ ಪ್ರಭಾವವೂ ಗೆಲುವಿಗೆ ಕಾರಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.