ADVERTISEMENT

ಮಳೆ: ಬಿತ್ತನೆ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:34 IST
Last Updated 3 ಜೂನ್ 2013, 10:34 IST

ಹನುಮಸಾಗರ: ಸಮೃದ್ಧವಾಗಿ ರೋಹಿಣಿ ಮಳೆ ಸುರಿದ ಪರಿಣಾಮಬಹುತೇಕ ಭಾಗದಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು ಭಾನುವಾರ ಕಂಡು ಬಂತು.

ಕಳೆದ ವಾರದಿಂದಲೇ ಈ ಭಾಗದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ರೈತರು ಮತ್ತೆ ಮಳೆ ಸುರಿಯಬಹುದೆಂದು ಬಿತ್ತನೆ ಆರಂಭಿಸ್ದ್ದಿದರು. ಇದೀಗ ಮತ್ತೆ ಮಳೆಯಾಗಿದ್ದು ಕೆಲ ರೈತರ ಸಂತಸ ಇಮ್ಮಡಿಯಾಗಲು ಕಾರಣವಾಗಿದೆ. ಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಹಾಗೂ ಕೆಲವೆಡೆ ಹಬ್ಬುಶೇಂಗಾ ಬಿತ್ತನೆ ಮಾಡುತ್ತಿರುವುದು ಕಂಡು ಬಂತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬಿತ್ತನೆ ನಡೆದಿದ್ದು ವಿಶೇಷವಾಗಿದೆ.

ಕಳೆದ ಎರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದಿರುವುದರಿಂದಾಗಿ ಹೆಸರು, ಮಟಿಗೆ, ತೊಗರೆ, ಎಳ್ಳಿನಂತಹ ಬೀಜಗಳ ಬಿತ್ತನೆ ನಡೆದಿದ್ದಿಲ್ಲ. ಆದರೆ ಈ ಬಾರಿ ಎಲ್ಲ ಬೀಜಗಳ ಭರಪೂರ ಬಿತ್ತನೆ ನಡೆದಿರುವ ಬಗ್ಗೆ ರೈತರು ಹೇಳುತ್ತಾರೆ. ಎತ್ತುಗಳ ಕೊರತೆ ಇರುವುದರಿಂದಾಗಿ ಗಳೆ ಬಾಡಿಗೆ ಗಗನಕ್ಕೇರಿದ್ದು ಒಂದು ಜೊತೆ ಗಳೆಗಳ ಬಾಡಿಗೆ 2,500 ರೂಪಾಯಿಯಾಗಿರುವುದಾಗಿ ರಾಜೇಸಾಬ ಹೇಳುತ್ತಾರೆ.

ಆದರೂ ಸರಿಯಾದ ಸಮಯಕ್ಕೆ ಗಳೆವುಗಳು ದೊರೆಯದೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಮುಗಿದ ನಂತರ ಬರುವುದಾಗಿ ಗಳೆವುಗಳ ಮಾಲೀಕರು ಹೇಳುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಕೆಲ ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆ ನಡೆಸುತ್ತಿದ್ದಾರೆ. ಈ ಭಾಗದ ರೈತರು ಈ ಬಾರಿ ಸುರಿದ ಮಳೆಯಿಂದ ಸಂತಸಗೊಂಡು ಕೂರಗಿಗಳಿಗೆ ಪೂಜೆ ಮಾಡಿ ಚಕ್ಕಡಿಗಳಿಗೆ ತಳಿರು ತೋರಣಗಳಿಂದ ಶೃಂಗಾರ ಮಾಡಿ ಬಿತ್ತನೆಗೆ ಹೊರಟಿರುವ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.