ADVERTISEMENT

ಮಸೂದೆ ಅಂಗೀಕಾರ: ಜನರ ಸಂತಸ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:39 IST
Last Updated 19 ಡಿಸೆಂಬರ್ 2012, 10:39 IST

ಕೊಪ್ಪಳ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಬಲ್ಲ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಮಸೂದೆಗೆ ಮಂಗಳವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಜನರು ವಿಜಯೋತ್ಸವ ಆಚರಿಸಿದರು.

ನಗರದ ಅಶೋಕ ವೃತ್ತದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಳೆದ ಎರಡು ದಶಕಗಳಿಂದ ಈ ಸಂಬಂಧ ನಡೆಯುತ್ತಿದ್ದ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಸಮಿತಿ ಕಾರ್ಯಕರ್ತರು, ರಾಜ್ಯಸಭೆಯಲ್ಲೂ ಸದರಿ ಮಸೂದೆಯನ್ನು ಅಂಗೀಕರಿಸಿ ಶೀಘ್ರ ಜಾರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಮಿತಿಯ ಮುಖಂಡ ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ಸರ್ಕಾರಿ ಸಹಾಯಕ ಅಭಿಯೋಜಕ ಬಿ.ಎಸ್.ಪಾಟೀಲ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ಜಗದೀಶಗೌಡ ತೆಗ್ಗಿನಮನಿ, ವೀರೇಶ ಮಹಾಂತಯ್ಯನಮಠ, ಪ್ರದೀಪಗೌಡ ಮಾಲಿಪಾಟೀಲ, ರಾಜಶೇಖರ ಅಂಗಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಹುಸೇನ್ ಪಾಷಾ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸಹ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ವಿಜಯೋತ್ಸವ ಆಚರಿಸಿದರು. ವೇದಿಕೆ ಮುಖಂಡರಾದ ಶಿವನಗೌಡ ಪಾಟೀಲ, ಗವಿಸಿದ್ಧಪ್ಪ ಕರ್ಕಿಹಳ್ಳಿ, ಶಿವಶರಣಪ್ಪ ಪಾಲ್ಗೊಂಡಿದ್ದರು.

ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಸಮಿತಿಯ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಎಚ್.ಎಸ್.ಪಾಟೀಲ ಅವರು, ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ ನೇತೃತ್ವದಲ್ಲಿ ನಡೆದ ಅವಿರತ ಹೋರಾಟದ ಫಲವಾಗಿ ಇಂದು ಸದರಿ ಮಸೂದೆಗೆ ಅಂಗೀಕಾರ ದೊರೆತಿದೆ ಎಂದರು.

ಈ ಸಂಬಂಧ ನಡೆದ ಹೋರಾಟದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸದರಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಈ ಭಾಗದ ಜನತೆ ನಡೆಸಿದ ಅಹಿಂಸಾತ್ಮಕ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ವಕೀಲರ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ವಿಜಯ ಅಮೃತರಾಜ್, ಉಪಾಧ್ಯಕ್ಷ ಲಿಂಗರಾಜ ಗೆಜ್ಜಿ ಕಾರ್ಯದರ್ಶಿ ಶ್ರೀನಿವಾಸ ನರಗುಂದ, ವಕ್ತಾರ ಪ್ರಕಾಶ ಪರುತಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಮಸೂದೆ ಅಂಗೀಕಾರ: ಸಂಸದ ಶಿವರಾಮಗೌಡ
ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಸಂಬಂಧ ಮಂಡಿಸಲಾದ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಸಂಸದ ಶಿವರಾಮಗೌಡ ಹೇಳಿದ್ದಾರೆ.

ನವದೆಹಲಿಯಿಂದ ದೂರವಾಣಿ ಮೂಲಕ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶದ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎಂದರು.

ವಿಧೇಯಕಕ್ಕೆ ಅಂಗೀಕಾರ ದೊರೆಯಲು ಶ್ರಮಿಸಿದ ಪ್ರಧಾನ ಮಂತ್ರಿ ಡಾ. ಮನಮೋಹನ್‌ಸಿಂಗ್, ಮುಖಂಡರಾದ ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಎಲ್ಲ ಸಂಸದರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಈ ತಿದ್ದುಪಡಿಯ ಸದುಪಯೋಗ ಪಡೆದುಕೊಂಡು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶಾಸಕ ಸಂಗಣ್ಣ ಕರಡಿ ಸಹ ಮಾತನಾಡಿ, ಸದರಿ ಮಸೂದೆಗೆ ಅಂಗೀಕಾರ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ತಿದ್ದುಪಡಿಗೆ ಒತ್ತಾಯಿಸಿ ಈ ಭಾಗದ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳ ಹೋರಾಟಕ್ಕೆ ಸಂದ ಜಯ ಇದಾಗಿದೆ. ರಾಜ್ಯ ಸರ್ಕಾರ ಈ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆಯುವ ನಿಟ್ಟಿನಲ್ಲಿ ಸಕಾಲದಲ್ಲಿ ಸ್ಪಂದಿಸಿದೆ. ಅದೇ ರೀತಿ, ದೆಹಲಿಯಲ್ಲಿರುವ ಬಿಜೆಪಿ ಮುಖಂಡರ ಪ್ರಯತ್ನವೂ ಈ ಕಾರ್ಯಕ್ಕೆ ಸಹಕಾರಿಯಾಗಿದ್ದು, ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿರುವ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT