ADVERTISEMENT

`ಮಾಲಿನ್ಯ ನಿಯಂತ್ರಣಕ್ಕೆ ಬದ್ಧರಾಗಿ'

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 9:53 IST
Last Updated 6 ಜೂನ್ 2013, 9:53 IST

ಯಲಬುರ್ಗಾ: ಪರಿಸರ ಪ್ರಜ್ಞೆ ಪ್ರತಿಯೊಬ್ಬ ನಾಗರೀಕರಲ್ಲಿ ಅನಾವರಣಗೊಳ್ಳುವುದರ ಜೊತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ವಿಶ್ವ ಪರಿಸರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ, ಪ್ರತಿಯೊಂದು ಕ್ಷೇತ್ರದಲ್ಲಿ ಮಾಲಿನ್ಯ ಉಂಟಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಅದನ್ನು ನಿಯಂತ್ರಣಕ್ಕೆ ಪ್ರತಿಯೊಬ್ಬರು ಬದ್ಧರಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಯಶವಂತ ತಾವರೆ ಹೇಳಿದರು.

ಪಟ್ಟಣದ ಎಸ್.ಎ ನಿಂಗೋಜಿ ಬಿ.ಈಡ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಇಲ್ಲದಿರುವುದು, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಹಾಗೂ ವಿಳಂಬ ನ್ಯಾಯದಾನ ಸೇರಿದಂತೆ ಇನ್ನಿತರ ಕಾರಣಗಳಿವೆ ಎಂಬುದನ್ನು ಸಮಿತಿಯೊಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ನಿಯಂತ್ರಣಕ್ಕೆ ಮುಂದಾಗಿದೆ.

ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದುರ ಜೊತೆಗೆ ಉಚಿತ ಕಾನೂನಿನ ನೆರವು, ಜನತಾ ನ್ಯಾಯಾಲಯದ ಮೂಲಕ ಪ್ರಕರಣಗಳ ಶೀಘ್ರ ಇತ್ಯರ್ಥ ಹಾಗೂ ಜನಸಾಮಾನ್ಯರಿಗೆ ದೈನಂದಿನ ವ್ಯವಹಾರಗಳಿಗೆ ಬೇಕಾದ ಅಗತ್ಯ ಕಾನೂನಿನ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಕಿರಿಯ ಶ್ರೇಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಮಾತನಾಡಿ, ಸಾಮಾಜಿಕ ಸಂಘಟನೆಯಲ್ಲಿ ಉತ್ತಮ ಪರಿಸರ ಸೃಷ್ಟಿಸುವಲ್ಲಿ ಪ್ರತಿಯೊಬ್ಬ ನಾಗರೀಕನ ಪಾತ್ರ ಮಹತ್ವದ್ದಾಗಿದೆ. ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ತ್ಯತೆ ಹೊಂದಿರುವ ನಾವುಗಳು ಇತರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಜಾಗೃತಿವಹಿಸುವುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ವಕೀಲ ಪ್ರಕಾಶ ಬೇಲೇರಿ, ವಿಶ್ವ ಪರಿಸರ ದಿನಾಚರಣೆ ಕುರಿತು, ವಕೀಲ ಎಸ್.ಎನ್. ಶ್ಯಾಗೋಟಿ ಜನಸಾಮಾನ್ಯರ ಕುರಿತು ಹಾಗೂ ಅರಣ್ಯಾಧಿಕಾರಿ ಅನ್ವರ್ ಅರಣ್ಯ ಸಂರಕ್ಷಣೆ ಕುರಿತು ಮಾತನಾಡಿದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಸವಿತಾ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ರಾಜಶೇಖರ ನಿಂಗೋಜಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎ ನಿಂಗೋಜಿ ಹಾಜರಿದ್ದರು. ವಿ.ವಿ. ಪತ್ತಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ನಾಯ್ಕರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.