ADVERTISEMENT

‘ಯಜ್ಞೋಪವಿತ ಸಮಾಜಗಳಿಗೆ ಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 9:38 IST
Last Updated 20 ನವೆಂಬರ್ 2017, 9:38 IST

ಹನುಮಸಾಗರ: 'ಕಡಿಮೆ ಜನಸಂಖ್ಯೆಯ 20ರಿಂದ 25 ಯಜ್ಞೋಪವಿತ ಸಮಾಜಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದ್ದು, ಇತರ ಸಣ್ಣ ಸಮಾಜಗಳಿಗೆ ನೀಡುವ ಸೌಲಭ್ಯಗಳನ್ನು ಇವುಗಳಿಗೂ ವಿಸ್ತರಿಸಬೇಕಾಗಿದೆ’ ಎಂದು ವೈಶ್ಯ ಸಮಾಜದ ಮುಖಂಡ ವಿಠಲ್‌ ಶ್ರೇಷ್ಠಿ ನಾಗೂರ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ಭಾನುವಾರ ಸರ್ಕಾರಿ ಸೌಲಭ್ಯಗಳಿಗೆ ಒತ್ತಾಯಿಸಿ ಯಜ್ಞೋಪವಿತ (ಜನಿವಾರ) ಸಮಾಜಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಈ ಎಲ್ಲ ಸಮಾಜಗಳಲ್ಲೂ ಕಡು ಬಡವರಿದ್ದಾರೆ. ಉತ್ತಮ ವ್ಯಾಸಂಗ ಮಾಡಲು ಆರ್ಥಿಕ ಸ್ಥಿತಿ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳಿದ್ದಾರೆ’ ಎಂದು ಹೇಳಿದರು.

ಪ್ರಹ್ಲಾದರಾಜ ದೇಸಾಯಿ ಮಾತನಾಡಿ, ‘ಈ ಸಮಾಜಗಳು ಹೋಬಳಿ ಮಟ್ಟದಿಂದಲೇ ಸಂಘಟಿತರಾಗಬೇಕು. ಕುಟುಂಬಗಳ ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡುವ ಜತೆಗೆ. ಶಿಕ್ಷಣ, ಉದ್ಯೋಗ ಹಾಗೂ ಇತರ ಸೌಲಭ್ಯಗಳಿಗಾಗಿ ಹೋರಾಟ ನಡೆಸುವ ಅನಿವಾರ್ಯ ಇದೆ’ ಎಂದು ಹೇಳಿದರು.

ADVERTISEMENT

ದೇವಾಂಗ ಸಮಾಜದ ಮುಖಂಡ ಪರಪ್ಪ ಕಾಳಗಿ ಮಾತನಾಡಿದರು.

ಶ್ರೀನಿವಾಸ ಜಹಗೀರದಾರ, ಶಿವಪ್ಪ ನೀರಾವರಿ, ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಎನ್.ಜಿ.ಗಂಗಾವತಿ, ದೇವಾಂಗ ಸಮುದಾಯದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಕ್ಷತ್ರಿಯ ಸಮಾಜದ ಅಧ್ಯಕ್ಷ ಡಾ.ಮಾರುತಿಸಾ ರಂಗ್ರೇಜ, ವೈಶ್ಯ ಸಮುದಾಯದ ಅಧ್ಯಕ್ಷ ಶ್ರೀನಿವಾಸ ಗುಡಿಕೋಟಿ, ವಿಶ್ವಕರ್ಮ ಸಮುದಾಯದ ಅಧ್ಯಕ್ಷ ವೀರಪ್ಪ ಪತ್ತಾರ, ಉಪ್ಪಾರ ಸಮುದಾಯದ ಕಿಷ್ಟಪ್ಪ ಬಂಡರಗಲ್, ಗೊಲ್ಲರ ಸಮುದಾಯದ ಡಿ.ಎಸ್.ಗೊಲ್ಲರ, ಬೈಲಪತ್ತಾರ ಸಮುದಾಯದ ಬೋಜರಾಜ್ ಪತ್ತಾರ, ರಾಜು ಸುಲಾಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.