ADVERTISEMENT

ಯಲಬುಣಚಿ: ಸೌಲಭ್ಯ ವಂಚಿತ ಗ್ರಾಮ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 8:30 IST
Last Updated 19 ಜುಲೈ 2012, 8:30 IST
ಯಲಬುಣಚಿ: ಸೌಲಭ್ಯ ವಂಚಿತ ಗ್ರಾಮ
ಯಲಬುಣಚಿ: ಸೌಲಭ್ಯ ವಂಚಿತ ಗ್ರಾಮ   

ಹನುಮಸಾಗರ: ಹದಗೆಟ್ಟ ರಸ್ತೆಗಳು, ರಸ್ತೆಯ ಮಧ್ಯೆ ಹರಿಯುವ ಊರ ಕೊಳಚೆ ನೀರು, ಕುಡಿಯುವ ನೀರಿನ ತೊಂದರೆ, ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇವು ಬೆನಕನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಲಬುಣಚಿ ಗ್ರಾಮದ ಬಹು ದಿನಗಳ ಸಮಸ್ಯೆಗಳಾಗಿವೆ.

ಜಿಲ್ಲೆಯ ಗಡಿ ಭಾಗದಲ್ಲಿರುವ ನಮ್ಮ ಗ್ರಾಮ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರದ ಹಲವಾರು ಯೋಜನೆಗಳು ಬಂದರೂ ಅವು ಕಾಗದ ಪತ್ರಗಳಲ್ಲಿ ಮಾತ್ರ ಸಿದ್ಧವಾಗಿ ಗ್ರಾಮ ಮಾತ್ರ ಸೌಲಭ್ಯಗಳಿಂದ ವಂಚಿತವಾಗುತ್ತಿದೆ ಎಂದು ಗ್ರಾಮಸ್ಥರಾದ ಎಂ.ಡಿ.ಸುಂಕದ, ಸಣ್ಣಹನುಮಪ್ಪ ಬಾವಿಗುರಿಕಾರ ದೂರುತ್ತಾರೆ.

ಗ್ರಾಮದಲ್ಲಿ ಮಹಿಳಾ ಶೌಚಾಲ ಇಲ್ಲದಿರುವುದರಿಂದ ಮಹಿಳೆಯರು ರಸ್ತೆಯ ಬದಿಗೆ ಬಹಿರ್ದೆಸೆಗೆ ಹೋಗುತ್ತಿರುವುದು ನಾಚಿಕೆ ಪಡುವ ಸಂಗತಿಯಾಗಿದೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದರೂ ಮಹಿಳಾ ಶೌಚಾಲಯ ನಿರ್ಮಾಣದ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಮೂರು ಕೊಳವೆಬಾವಿಗಳಿದ್ದು ಅವುಗಳಲ್ಲಿ ನೀರು ಕಡಿಮೆಯಾಗಿರುವ ಕಾರಣ ಮೇಲ್ತೊಟ್ಟಿಗೆ ನೀರು ಏರುತ್ತಿಲ್ಲ. ಒಂದು ಕೊಳವೆಬಾವಿಗೆ ಮೋಟರ್, ಪೈಪ್‌ಲೈನ್ ಜೋಡಿಸಿಲ್ಲ, ಗ್ರಾಮದಲ್ಲಿ ನಿಲ್ಲಿಸಲಾದ ನೀರಿನ ತೊಟ್ಟಿಗಳಿಗೆ ಹನಿ ನೀರು ಸರಬುರಾಜಾಗಿಲ್ಲ. 

ಇನ್ನೊಂದು ಬೋರ್‌ವೆಲ್ ಕೊರೆಯಿಸಿ ಮೇಲ್ತೊಟ್ಟಿಗೆ ನೀರು ಏರುವಂತೆ ಕ್ರಮ ಕೈಕೊಳ್ಳಬೇಕು ಎಂದು ರಾಜೇಸಾಬ ಮೂಲಿಮನಿ ಹಾಗೂ ಚಂದಪ್ಪ ಕುಂಟೋಜಿ ಒತ್ತಾಯಿಸಿದರು.ಬಹುದಿನಗಳಿಂದ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿರುವುದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಹದಗೆಟ್ಟ ರಸ್ತೆಗಳನ್ನು ಕೂಡಲೆ ದುರಸ್ಥಿಗೊಳಿಸಬೇಕು, ಚರಂಡಿ ನಿರ್ಮಿಸಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳೆದ ವರ್ಷ ಜನರಿಗೆ ಕೆಲಸ ನೀಡಿಲ್ಲ, ಈ ವರ್ಷ ಈ ವರೆಗೂ ಯೋಜನೆಯನ್ನು ಜಾರಿಗೊಳಿಸಿಲ್ಲ, ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಆಶ್ರಯ ಮನೆಗಳು ಮಾತ್ರ ಮಂಜೂರಾಗಿದ್ದು ಅವು ಅರ್ಹ ಫಲಾನುಭವಿಗಳಿಗೆ ದಕ್ಕಿಲ್ಲ ಎಂದು ಆರೋಪಿಸಿದರು.

ಯಲಬುಣಚಿಯಿಂದ ಡೊಣ್ಣೆಗುಡ್ಡಕ್ಕೆ ಹೋಗುವ ಕಚ್ಚಾ ರಸ್ತೆಯನ್ನು ಡಾಂಬರೀಕರಣ ಮಾಡಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಈ ವರೆಗೂ ನಿರ್ಮಾಣ ಮಾಡಿಲ್ಲ. ದಶಕಗಳಿಂದಲೂ ಈ ರಸ್ತೆ ಕಚ್ಚಾ ರಸ್ತೆಯಾಗಿಯೇ ಇದೆ. ರಸ್ತೆಗೆ ಒಂದು ಹಿಡಿ ಮಣ್ಣು ಹಾಕಿಲ್ಲ, ಕಲಾಲಬಂಡಿ ಗ್ರಾಮ ಸೇರುವ ರಸ್ತೆಯನ್ನು ಕೇವಲ 1 ಕಿ.ಮೀ. ಮಾಡಲಾಗಿದ್ದು, ಅದೂ ಕೂಡಾ ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.                             
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.