ADVERTISEMENT

ಯಲಬುರ್ಗಾ: ಪಲ್ಲಕ್ಕಿ ಮೆರವಣಿಗೆ ಸಡಗರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:05 IST
Last Updated 7 ಅಕ್ಟೋಬರ್ 2011, 9:05 IST

ಯಲಬುರ್ಗಾ: ಸ್ಥಳೀಯ ಸಂಸ್ಥಾನ ಹಿರೇಮಠದ ಭಕ್ತರು, ಶ್ರೀಧರ ಮುರಡಿ ಹಿರೇಮಠದ ಭಕ್ತರು, ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಏಳುಕೋಟಿ ಮಲ್ಲಯ್ಯನ ಭಕ್ತರು ಪ್ರತ್ಯೇಕವಾಗಿ ಪಲ್ಲಕ್ಕಿ ಉತ್ಸವದೊಂದಿಗೆ ಅದ್ದೂರಿಯಾಗಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಸಡಗರ ಸಂಭ್ರಮದೊಂದಿಗೆ ಚಾಲನೆ ನೀಡಿದರು.  

ಸಿದ್ಧರಾಮೇಶ್ವರಮಠದ ವತಿಯಿಂದ ಹೊರಟ ಮೆರವಣಿಗೆಯುವ ದಿವಟರ್ ಹೊಲದ ಹತ್ತಿರದ ಸಿದ್ಧೇಶ್ವರ ಶಿಲಾಮಂಟಪದ ಬಳಿ ಇರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಗೆಯೇ ಶ್ರೀಧರಮುರಡಿ ಹಿರೇಮಠದ ವತಿಯಿಂದ ಹೊರಟ ಮೆರವಣಿಗೆಯಲ್ಲಿ ಶ್ರೀಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಾಕಷ್ಟು ಸಂಖ್ಯೆಯ ಭಕ್ತ ಸಮೂಹದಲ್ಲಿ ಹೊರಟ ಮೆರವಣಿಗೆ ಗದ್ದುಗೆಮಠದ ಬಳಿ ಇರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿ ಕಾರ್ಯಕ್ಕೆ ಅಣಿಮಾಡಿಕೊಟ್ಟರು.

ಅದೇರೀತಿ, ಬ್ರಾಹ್ಮಣ ಸಮಾಜದ ಮುಖಂಡರು ಪಲ್ಲಕ್ಕಿ ಮೆರವಣಿಗೆಯೊಂದಿಗೆ ಕುದ್ರಿಕೊಟಗಿ ಹಳೆ ರಸ್ತೆಯ ಬದಿಯ್ಲ್ಲಲಿ ದಿಬ್ಬದಲ್ಲಿರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು. ಏಳುಕೋಟಿ ಮಲ್ಲಯ್ಯ ದೇವರ ಭಕ್ತರು ಕೂಡಾ ವಿವಿಧ ರೀತಿಯ ಸಂಪ್ರದಾಯದ ಚಟುವಟಿಕೆಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಕೈಗೊಂಡು ಊರಾಚೆ ಇರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ್ದು ಕಂಡು ಬಂತು.

ಪಟ್ಟಣದ ವಿವಿಧ ಮಠಗಳು ಹಾಗೂ ಸಮಾಜ ಬಾಂಧವರು ವಿವಿಧ ಸ್ಥಳಗಳಲ್ಲಿರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಪಟ್ಟಣದಲ್ಲಿ ನಡೆಯುವ ಬನ್ನಿಮುಡಿ ಕಾರ್ಯಕ್ರಮಕ್ಕೆ ಸಂಜೆ 5ರಿಂದ 6ಗಂಟೆಯೊಳಗೆ ಅದ್ದೂರಿ ಚಾಲನೆ ನೀಡಿದರು.

ನಂತರದಲ್ಲಿ ಸಾರ್ವಜನಿಕರು ಒಬ್ಬರಿಗೊಬ್ಬರು ಬನ್ನಿಮರದ ಎಲೆಯನ್ನು ವಿನಿಮಯ ಮಾಡಿಕೊಂಡು ಒಬ್ಬರಿಗೊಬ್ಬರು ಬಂಗಾರದಂತಿರೋಣ ಎಂದು ಹೇಳಿಕೊಳ್ಳುತ್ತಾ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಪ್ರಯತ್ನಮಾಡುತ್ತಿರುವುದು ಸಾಮಾನ್ಯವಾಗಿತ್ತು.

ಆಯುಧ ಪೂಜೆ: ಬುಧವಾರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಯುಧ ಪೂಜೆ ಜರುಗಿದ್ದು, ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿನ ಯಂತ್ರಗಳು ಹಾಗೂ ವಿವಿಧ ಸಾಮಗ್ರಿಗಳನ್ನು ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ವಿವಿಧ ವಾಹನಗಳ ಮಾಲೀಕರು ತಮ್ಮ ತಮ್ಮ ವಾಹನಗಳನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಊರ ತುಂಬೆಲ್ಲ ಸಂಚರಿಸಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಂದೂಕು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಪೂಜೆ ಸಲ್ಲಿಸಿದರು. ಹಾಗೆಯೇ ಮನೆಗಳಲ್ಲಿನ ಎಲ್ಲಾ ವಿಧದ ಆಯುಧಗಳನ್ನು ಪೂಜಿಸಿ ಹಬ್ಬವನ್ನು ಆಚರಿಸಿದ್ದು ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.