ADVERTISEMENT

ಯಲಬುರ್ಗಾ: ರ‌್ಯಾವಣಕಿ ಪ್ರಾಣದೇವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 6:45 IST
Last Updated 2 ಏಪ್ರಿಲ್ 2012, 6:45 IST

ಯಲಬುರ್ಗಾ:  ತಾಲ್ಲೂಕಿನ ಹಲವು ದೊಡ್ಡ ಜಾತ್ರೆಗಳ್ಲ್ಲಲೊಂದಾದ ರ‌್ಯಾವಣಕಿ ಪ್ರಾಣದೇವರ (ವೀರಾಪೂರದಣ್ಣ) ಜಾತ್ರೆ ಭಾನುವಾರ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.

ತಾಲ್ಲೂಕಿನ ದೂರ ದೂರದ ಸ್ಥಳಗಳಿಂದ ಆಗಮಿಸಿದ ಸಾವಿರಾರು ಭಕ್ತ ಸಮೂಹದ ನಡುವೆ ಸಂಜೆ ವಿಜೃಂಭಣೆಯ ಮಹಾ ರಥೋತ್ಸವ ನಡೆಯಿತು. ರ‌್ಯಾವಣಕಿ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಈ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಿದ್ದು, ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬರುವುದರಿಂದ ಈ ಜಾತ್ರೆ ದೊಡ್ಡಪ್ರಮಾಣದಲ್ಲಿಯೇ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಿದ್ದು, ಹಲವು ವಿಶೇಷಗಳಿಂದ ಈ ವರ್ಷ ಹೆಚ್ಚು ಆಕರ್ಷಣಿಯವಾಗಿತ್ತು.

ಜಾತ್ರೆಯ ಅಂಗವಾಗಿ ಶನಿವಾರ ಕಳಸದ ಮೆರವಣಿಗೆ ಸಂಜೆ ಉತ್ಸವದ ಮೆರವಣಿಗೆ ರಾತ್ರಿ ಅಂಗಿಕುಂಡೋತ್ಸವ ಹಾಗೂ ಲಘು ರಥೋತ್ಸವ ಅನ್ನ ಸಂತರ್ಪಣೆ ಕಾರ್ಯ ಸಂಭ್ರಮದಿಂದ ನಡೆದವು. ಭಾನುವಾರ ಬೆಳಿಗ್ಗೆ ರ‌್ಯಾವಣಕಿ ಗ್ರಾಮದಲ್ಲಿ ಪ್ರಾಣದೇವರ ಮೂರ್ತಿ ಮೆರವಣಿಗೆ, ಸಂಜೆ 5ರ ಹೊತ್ತಿಗೆ ಆರಂಭಗೊಂಡ ರಥದ ಮೆರವಣಿಗೆ ಸುಮಾರು ಒಂದು ಕಿ.ಮೀ ದೂರದ ಕಾಳಮ್ಮ ದೇವಿಗುಡಿ(ಪಾದಗಟ್ಟಿ) ತಲುಪಿ ಅಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಯಲಬುರ್ಗಾ, ಮಂಗಳೂರು, ಕುಕನೂರು, ಹಿರೇಬೀಡನಾಳ, ಕಲ್ಲೂರು, ಚಿಕ್ಕಮ್ಯಾಗೇರಿ, ಶಿರೂರ, ಮುತ್ತಾಳ, ಕುಡಗುಂಟಿ, ಅಲ್ಲದೇ ಕುಷ್ಟಗಿ ಹಾಗೂ ಕೊಪ್ಪಳ ತಾಲ್ಲೂಕಿನ ಅನೇಕ ಗ್ರಾಮಗಳಿಂದ ಭಕ್ತರು ಜಾತ್ರೆಗೆ ಆಗಮಿಸಿದ್ದು ಕಂಡು ಬಂತು. ರ‌್ಯಾವಣಕಿ ವೀರಣ್ಣ ಎಂದೇ ಖ್ಯಾತಿಯಾದ ಈ ಪ್ರಾಣದೇವರ (ಮಾರುತೇಶ್ವರ)ಹಾಗೂ ಈ ದೇವಸ್ಥಾನದ ಬಗ್ಗೆ ಸಾಕಷ್ಟು ಐತಿಹ್ಯಗಳಿದ್ದು, ಇಂದಿಗೂ ಹಿರಿಯರು ಈ ದೇವಸ್ಥಾನ ಹಾಗೂ ದೇವರ ಮಹಿಮೆ ಬಗ್ಗೆ ಭಾರಿ ಅಭಿಮಾನದಿಂದ ಕೊಂಡಾಡುತ್ತಾರೆ.

ಬಹುತೇಕ ಎಲ್ಲಾ ಸಮಾಜದವರು ಭಕ್ತಿಭಾವದಿಂದ ಈ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ನೆರವೇರಿಸುತ್ತಿರುವುದು ಸುಮಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಇಷ್ಟಾರ್ಥಗಳನ್ನು ಸಿದ್ದಿಸುವ ದೇವರು ಎಂದೇ ಕರೆಯಿಸಿಕೊಳ್ಳುವ ಈ ವೀರಣ್ಣ ದೇವರ ಮುಂದೆ ಇರುವ ಪಾದುಕೆಗಳನ್ನು ಮೈಗೆ ಬಡೆದುಕೊಳ್ಳುವುದರಿಂದ ಮೈಯಲ್ಲಿರುವ ಜಡತ್ವ, ರೋಗ ರುಜಿನಗಳಿಂದ ಗುಣಮುಖರಾಗುತ್ತಾರೆಂಬುದು ಗ್ರಾಮೀಣರ ನಂಬುಕೆ. ಈ ನಂಬುಕೆಯಿಂದಲೇ ಸುತ್ತಮುತ್ತಲಿನ ಅನೇಕ ಜನರು ದೇವಸ್ಥಾನಕ್ಕೆ ಬಂದು ಹರಿಕೆ ಹೊತ್ತಿದ್ದ ಭಕ್ತರು ಮಾಡಿಸಿಟ್ಟದ್ದ ಪಾದುಕೆಗಳನ್ನು ಮೈ, ಕೈಗಳಿಗೆ ಬಡೆದುಕೊಳ್ಳುವುದು ಇಂದಿಗೂ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.