ADVERTISEMENT

ರಾಜಕಾರಣಿಗಳ ಬ್ಯಾಂಕ್‌ ಖಾತೆಯ ಮೇಲೆ ಕಣ್ಣು

ಚುನಾವಣಾ ಆಯೋಗದಿಂದ ಮಾಹಿತಿ

ಶ್ರಿನಿವಾಸ ಎಂ.ಬಿ.ಬೆಂಗಳೂರು .
Published 18 ಮಾರ್ಚ್ 2014, 9:41 IST
Last Updated 18 ಮಾರ್ಚ್ 2014, 9:41 IST

ಗಂಗಾವತಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜಕಾರಣಿಗಳ ಅಕ್ರಮ ’ಹಣದ ಹರಿವಿನ’ ಪ್ರಮಾಣದ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗವು, ಜಿಲ್ಲೆಯಲ್ಲಿರುವ ರಾಜ­ಕಾ­ರಣಿಗಳ ಬ್ಯಾಂಕ್‌ ಖಾತೆಯ ಮಾಹಿತಿ ಕಲೆ ಹಾಕುತ್ತಿದೆ ಎಂಬ  ಅಂಶ ಬೆಳಕಿಗೆ ಬಂದಿದೆ.

ವಿಷೇಷವಾಗಿ ಚುನಾವಣಾ ಅಖಾ­ಡಕ್ಕೆ ಧುಮಕಲಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಅಭ್ಯರ್ಥಿ­ಗಳು ಚುನಾವಣಾ ಖರ್ಚು–ವೆಚ್ಚಕ್ಕಾಗಿ ಆಯೋಗಕ್ಕೆ ಸಲ್ಲಿಸಲಿರುವ ದೈನಂದಿನ ಮಾಹಿತಿ ಮತ್ತು ಅವರು ನೀಡುವ ಖಾತೆಯ ಮೇಲೆ ಕಣ್ಣಿಡಲು ಆಯೋ­ಗವು, ಅಧೀನ ಅಧಿಕಾರಿಗಳಿಗೆ ಸೂಚಿಸಿದೆ ಎನ್ನಲಾಗಿದೆ.

ಚುನಾವಣೆಯಲ್ಲಿ ಆಯೋಗ ವಿಧಿಸಿ­ರುವ ವೆಚ್ಚದ ಮಿತಿಯನ್ನು ಕಣ್ತಪ್ಪಿಸಿ ಹೆಚ್ಚುವರಿ ಹಣದ ಮೂಲಕ ರಾಜಕಾ­ರ­ಣಿಗಳು ಅಕ್ರಮ ’ಹಣದ ಹರಿವು’ವಿನಲ್ಲಿ ತೊಡಗಬಹುದು ಎಂಬ ದೂರಾ­ಲೋ­ಚ­ನೆ­ಯಿಂದ ಚುನಾವಣೆ ಆಯೋಗ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಅಭ್ಯರ್ಥಿಗಳು ಮತ್ತವರ ಕುಟುಂಬ ಸದಸ್ಯರು ಚುನಾವಣೆಗಾಗಿ ಮಾಡುವ ವೆಚ್ಚವನ್ನು ಬ್ಯಾಂಕ್‌ ಖಾತೆಯ ಮೂಲ­ಕವೇ ಪಾವತಿಸಬೇಕು ಎಂಬ ನಿಯಮದ ಬೆನ್ನ ಹಿಂದೆಯೆ, ಅಭ್ಯರ್ಥಿಗಳ ಬ್ಯಾಂಕ್‌ ಖಾತೆಯ ಮೇಲೆ ನಿಗಾ ವಹಿಸಿ ಮಾಹಿತಿ ಸಂಗ್ರಹದಲ್ಲಿ ತಂಡ ತೊಡಗಿದೆ ಎಂದು ತಿಳಿದಿದೆ.

ಸಾರ್ವಜನಿಕರನ್ನು ಪ್ರೇರೇಪಿಸಲು, ಅಥವಾ ಮತದಾರರನ್ನು ಓಲೈಸಿಕೊ­ಳ್ಳಲು ರಾಜಕಾರಣಿಗಳು ದುಂದು ವೆಚ್ಚಕ್ಕೆ ಕೈಹಾಕುವ ಸಾಧ್ಯತೆಗಳಿವೆ ಎನ್ನುವುದನ್ನು ಮನಗಂಡ ಚುನಾವಣೆ ಆಯೋಗ, ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿರುವ ಪಕ್ಷ ನಾಯಕರ ‘ಖಾತೆಗಳ ಮೇಲೆ ನಿಗಾ’  ಇಟ್ಟಿದೆ.

ಕೇವಲ ಅಖಾಡಕ್ಕೆ ಧುಮುಕುವ ಅಭ್ಯರ್ಥಿಗಳು ಮಾತ್ರವಲ್ಲ, ವಿವಿಧ ಪಕ್ಷಗಳ ರಾಜಕಾರಣಿ, ಅವರ ಕುಟುಂಬ ಸದಸ್ಯರು ಹಾಗೂ ಉದ್ಯಮಿಗಳ ಖಾತೆಯಲ್ಲಿ ಒಂದೇ ದಿನದಲ್ಲಿ ಸಕಾರಣವಿಲ್ಲದೇ ದೊಡ್ಡ ಮೊತ್ತದ ಹಣ ವರ್ಗಾವಣೆಯಾದರೆ ಗಮನಕ್ಕೆ ತರುವಂತೆ ಆಯೋಗ ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಹಣ ವರ್ಗಾವಣೆ: ಕಾರಣ ಪಡೆಯಲು ಸೂಚನೆ
‘ಸಾಮಾನ್ಯ ಗ್ರಾಹಕರು ಈಗಾಗಲೇ ಒಂದು ಬಾರಿಗೆ ₨49 ಸಾವಿರ ಮೊತ್ತದವರೆಗೂ ತಮ್ಮ ಖಾತೆಗೆ ನೇರವಾಗಿ ಹಣ ಹಾಕಬಹುದು. ₨50 ಸಾವಿರಕ್ಕೂ ಹೆಚ್ಚಿನ ಹಣ ವರ್ಗಾವಣೆಗೆ ಪ್ಯಾನ್‌ ಸಂಖ್ಯೆ ನೀಡಬೇಕು. ಐದು ಲಕ್ಷಕ್ಕೂ ಹೆಚ್ಚು ಮೊತ್ತದ ವರ್ಗಾವಣೆಗೆ ಗ್ರಾಹಕರಿಂದ ಕಾರಣ ಪಡೆಯುವಂತೆ ಸೂಚನೆ ಬಂದಿದೆ. 

ಚುನಾವಣಾ ಆಯೋಗದೊಂದಿಗೆ ತೆರಿಗೆ ಇಲಾಖೆಯೂ ಕೈಜೋಡಿಸಿದ್ದು, ಪ್ರಸಕ್ತ ಸಾಲಿನ ತೆರಿಗೆ ವಂಚಿಸುವ ಬ್ಯಾಂಕ್‌ ಗ್ರಾಹಕರ ಖಾತೆಯಿಂದ ವರ್ಗಾವಣೆಯಾಗುವ ಹಣದ ಬಗ್ಗೆ ಆನ್‌ಲೈನ್‌ ಮೂಲಕ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ’ ಎಂದು  ಬ್ಯಾಂಕ್‌ ನೌಕರೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.