ADVERTISEMENT

ರಾಜೀವ ಗಾಂಧಿ ಕಂಡ ಕನಸು ನನಸು

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:00 IST
Last Updated 7 ಜನವರಿ 2012, 10:00 IST
ರಾಜೀವ ಗಾಂಧಿ ಕಂಡ ಕನಸು ನನಸು
ರಾಜೀವ ಗಾಂಧಿ ಕಂಡ ಕನಸು ನನಸು   

ಕುಕನೂರು: ಸೌಲಭ್ಯವಂಚಿತ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗುಣಮಟ್ಟದ ಶಿಕ್ಷಣ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಅವರು ಆರಂಭಿಸಿದ ಕುಕನೂರಿನ ಕೇಂದ್ರ ಸರ್ಕಾರದ ಜವಾಹರ ನವೋದಯ ವಿದ್ಯಾಲಯಕ್ಕೆ ಈಗ 25ರ ಹರೆಯ.

ಪ್ರಯೋಗಾರ್ಥವಾಗಿ ಹರ‌್ಯಾಣದ ಜುಜ್ಜರ ಹಾಗೂ ಮಹಾರಾಷ್ಟ್ರದ ಅಮರಾವತಿಯಲ್ಲಿ 1985ರಲ್ಲಿ ಪ್ರಥಮ ಬಾರಿಗೆ ಎರಡು ನವೋದಯ ಶಾಲೆಗಳನ್ನು ಆರಂಭಿಸಲಾಗಿತ್ತು. 1986ರಲ್ಲಿ ರಾಜ್ಯಕ್ಕೆ 5 ವಿದ್ಯಾಲಯಗಳು ಮಂಜೂರಾಗಿದ್ದವು. ಇದರಲ್ಲಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಕಾರ‌್ಯಾರಂಭಗೊಂಡ ಹೆಗ್ಗಳಿಕೆ ಅಂದಿನ ಅವಿಭಜಿತ ರಾಯಚೂರ ಜಿಲ್ಲೆಯ ಕುಕನೂರಿನ ಜವಾಹರ ನವೋದಯ ವಿದ್ಯಾಲಯಕ್ಕೆ ಸಲ್ಲುತ್ತದೆ. ಇಂತಹ ಪ್ರತಿಷ್ಠಿತ ಶಾಲೆಯನ್ನು ಯಲಬುರ್ಗಾ ತಾಲ್ಲೂಕಿಗೆ ಮಂಜೂರು ಮಾಡಿಸಿದ ಶ್ರೇಯಸ್ಸು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಸಲ್ಲುತ್ತದೆ.

ಅಂದಿನಿಂದ ಇಂದಿನವರೆಗೂ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸುಮಾರು 1650ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಶೇ 75ರಷ್ಟು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳ ಪ್ರತಿಷ್ಠಿತ ಕಂಪೆನಿಗಳಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರಾಗಿ, ವೈದ್ಯರಾಗಿಯೂ ಹಾಗೂ ವಿಜ್ಞಾನ ಸಂಶೋಧನಾ ಕೇಂದ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಆಧುನಿಕ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಸಾಧಿಸಲು ಧಾಪುಗಾಲು ಹಾಕುತ್ತಿರುವುದನ್ನು ಗಮನಿಸಿದರೆ ದಿ.ರಾಜೀವ ಗಾಂಧಿ ಅವರು ಕಂಡ ಕನಸು ಇದೀಗ ನನಸಾಗುವತ್ತ ಸಾಗಿದೆ.

1986ರಲ್ಲಿ ಕುಕನೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಟ್ಟಡದಲ್ಲಿ ಆರಂಭವಾದ ಶಾಲೆಯನ್ನು ಐತಿಹಾಸಿಕ, ಧಾರ್ಮಿಕ ಹಾಗೂ ಅತ್ಯುತ್ತಮ ಪರಿಸರ ಹೊಂದಿದ ಗುದ್ನೆಪ್ಪನಮಠದಲ್ಲಿ ನಿರ್ಮಿಸಿದ ಸುಂದರವಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 526 ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಟ್ಟಡದಲ್ಲಿ ಒಂದು ಆಡಳಿತ ವಿಭಾಗ, ಮೂರು ಶೈಕ್ಷಣಿಕ ವಿಭಾಗ, ವಾಚನಾಲಯ, ಭವ್ಯವಾದ ಆಟದ ಮೈದಾನ, ಸುಸಜ್ಜಿತವಾದ ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕವಾದ ಊಟ ಮತ್ತು ವಸತಿ ನಿಲಯಗಳು ಇದ್ದು, ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿದ ಪ್ರಾಚಾರ್ಯರನ್ನು ಒಳಗೊಂಡ 43 ಜನ ಸಿಬ್ಬಂದಿ ವರ್ಗವು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

`ಬಹುತೇಕ ಸ್ನೇಹಿತರು ಇಂದು ವಿವಿಧ ಪ್ರತಿಷ್ಠಿತ ಕಂಪೆನಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರಾಗಿ, ವೈದ್ಯರಾಗಿ  ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವಂತಾಗಲು ನವೋದಯ ವಿದ್ಯಾಲಯದ ಗುಣಮಟ್ಟದ ಶಿಕ್ಷಣ ಕಾರಣ, ನಾವೆಲ್ಲರೂ ನವೋದಯ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ~ ಎಂದು ಶಾಲೆಯ 3ನೇ ತಂಡದ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಹಳ್ಳೂರ, ಡಾ.ಶಿವಣ್ಣ ಹಾಗೂ ಮಾರ್ಕಂಡಯ್ಯ `ಪ್ರಜಾವಾಣಿ~ ಜತೆಗೆ ಸಂಭ್ರಮ ಹಂಚಿಕೊಂಡರು.

ಶನಿವಾರ ನಡೆಯುವ ಬೆಳ್ಳಿಹಬ್ಬದ ಸವಿನೆನಪಿಗಾಗಿ ರಕ್ತದಾನ ಶಿಬಿರ, ಗುರುವಂದನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗಿದ್ದು 500ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ವರ್ಗದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. `ನಮ್ಮ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡು ಮಾತೃ ಸಂಸ್ಥೆಗೆ ಆಗಮಿಸುವ ಸಂಗತಿ ನಮಗೆಲ್ಲರಿಗೂ ಸಂತಸ ತಂದಿದೆ~ ಎಂದು ಪ್ರಾಚಾರ್ಯ ಡಿ.ಶ್ಯಾಮಪ್ರಕಾಶ, ಹಿರಿಯ ಶಿಕ್ಷಕ ಎಂ.ಪ್ರಲ್ಹಾದ, ಅಧೀಕ್ಷಕ ಮೇಘರಾಜ ಜಿಡಗಿ ಹಾಗೂ ಇಡೀ ಸಿಬ್ಬಂದಿ ವರ್ಗ ಹೆಮ್ಮೆಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.