ADVERTISEMENT

ರಾಜ್ಯದ ರೈತರ ಆತ್ಮಹತ್ಯೆಗೆ ಸಿದ್ದರಾಮಯ್ಯ ಹೊಣೆ

ಕುಕನೂರು: ಸಾರ್ವಜನಿಕ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅಮಿತ್‌ ಶಾ ಕಿಡಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:16 IST
Last Updated 28 ಏಪ್ರಿಲ್ 2018, 12:16 IST
ಕೊಪ್ಪಳ ತಾಲ್ಲೂಕಿನ ಕುಕನೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜನರತ್ತ ಕೈಬೀಸಿದರು. ಸಂಸದ ಸಂಗಣ್ಣ ಕರಡಿ ಹಾಗೂ ಯಲಬುರ್ಗಾ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಜನರತ್ತ ಕೈ ಮುಗಿದರು
ಕೊಪ್ಪಳ ತಾಲ್ಲೂಕಿನ ಕುಕನೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜನರತ್ತ ಕೈಬೀಸಿದರು. ಸಂಸದ ಸಂಗಣ್ಣ ಕರಡಿ ಹಾಗೂ ಯಲಬುರ್ಗಾ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಜನರತ್ತ ಕೈ ಮುಗಿದರು   

ಕುಕನೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶುಕ್ರವಾರ ಇಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಮಾವೇಶದಲ್ಲಿ ಆರೋಪಿಸಿದರು.

’ರಾಜ್ಯದಲ್ಲಿ 3,700ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾವಿನ ಪ್ರಮಾಣ ಶೇ 173ರಷ್ಟು ಹೆಚ್ಚಳವಾಗಿದೆ. ಸಿದ್ದರಾಮಯ್ಯ ಅವರು ಭರವಸೆ ನೀಡಿದ ಶೇ 99ರಷ್ಟು ಕಾರ್ಯಗಳನ್ನು ಮುಗಿಸಿದ್ದೇವೆ ಎನ್ನುತ್ತಿದ್ದಾರೆ. ಆದರೆ ಅವರು ಮುಗಿಸಿರುವುದು ರೈತರ ಸಾವಿನ ಪ್ರಮಾಣವನ್ನು ಮಾತ್ರ. ಅದನ್ನು ಇನ್ನೂ ಹೆಚ್ಚಿಸುವುದು ಬಾಕಿ ಇದೆ’ ಎಂದು ವ್ಯಂಗ್ಯವಾಡಿದರು.

’ರೈತರ ಆತ್ಮಹತ್ಯೆ, ಕೋಮು ಹತ್ಯೆ, ಮಹಿಳೆಯರಿಗೆ ಅಸುರಕ್ಷಿತ ವಾತಾವರಣ, ಭ್ರಷ್ಟಾಚಾರ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ 24 ಗಂಟೆ ವಿದ್ಯುತ್‌ ಕೂಡಾ ಸಿಗುತ್ತಿಲ್ಲ. ಬೆಳೆಗೆ ತಕ್ಕ ಬೆಲೆ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

’33 ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಚುನಾವಣಾ ಫಲಿತಾಂಶದ ಬಳಿಕ ಮೋದಿ ಅವರ ವಿಕಾಸಪರ್ವ ರಾಜ್ಯದಲ್ಲಿ ಆರಂಭವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀರಾವರಿಗೆ ಮನವಿ: ಸತತ ಬರಗಾಲದಿಂದ ತತ್ತರಿಸುವ ಯಲಬುರ್ಗಾ ತಾಲ್ಲೂಕಿನ ಜನತೆಗೆ ನೀರಾವರಿ ಸೌಲಭ್ಯ ಜಾರಿ ಮಾಡುವುದು ಅವಶ್ಯಕ ಎಂದು ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಹೇಳಿದರು.

2014ರಲ್ಲಿ 4 ರಾಜ್ಯಗಳಲ್ಲಿ ಅಧಿಕಾರವಿದ್ದ ಪಕ್ಷ, ಈಗ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಇದಕ್ಕೆ ಕಾರಣ ಮೋದಿ ಅವರ ಅಭಿವೃದ್ಧಿ ಆಡಳಿತವೇ ಸಾಕ್ಷಿ. ಬಡವರ ಪರ, ಅಸಹಾಯಕ ಸ್ತ್ರೀಯರ ಪರ, ರೈತರ ಪರ ಕೆಲಸ ಮಾಡುವ ಮೂಲಕ ದೇಶದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ’ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ’ಕೇಂದ್ರ ಸರ್ಕಾರ 10 ಕೋಟಿ ಜನರಿಗೆ ಸ್ವಂತ ಉದ್ಯೋಗಕ್ಕೆ ಧನ ಸಹಾಯಮಾಡಿದೆ. ಕಾಂಗ್ರೆಸ್ ಸರ್ಕಾರದಂತೆ ಗರೀಬಿ ಹಠಾವೋ ಎನ್ನುತ್ತಾ ಮಾತಿನಲ್ಲೆ ಮನೆಕಟ್ಟುವುದಿಲ್ಲ. ನಮ್ಮದು ಶುದ್ಧ ಸರ್ಕಾರ, ಕಾಂಗ್ರೆಸ್ ಸರ್ಕಾರವನ್ನು ಎಲ್ಲರೂ ಕೂಡಿ ಬುಡಶ್ರೀಸಮೇತ ಕಿತ್ತೊಗೆಯೋಣ’ ಎಂದು ಹೇಳಿದರು.

’ಬಿಜೆಪಿಯ ವಿಜಯರಥ ದೇಶದ ಯಾವ ಕಡೆಹೋದರೂ ವಿಜಯದ ಪತಾಕೆಯನ್ನೇ ಹಾರಿಸಿದೆ. ಈಗ ಕರ್ನಾಟಕದ ಕಡೆಗೆ ಬಂದಿದೆ, ಇಲ್ಲಿಯೂ ಬಿಜೆಪಿಯ ವಿಜಯದ ಕಹಳೆ ಮೊಳಗಲಿದೆ’ ಎಂದು ಭವಿಷ್ಯ ನುಡಿದರು.

ಹಿರೇವಂಕಲಕುಂಟ ಜಿಲ್ಲಾ ಕ್ಷೇತ್ರ, ಮುಧೋಳ, ತಳಕಲ್‌, ಮಂಗಳೂರು, ಇಟಗಿ, ಚಿಕ್ಕಮ್ಯಾಗೇರಿ ಆರು ಜಿಲ್ಲಾ ಕ್ಷೇತ್ರಗಳಿಂದ ಸಾವಿರಾರು ಜನ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.