ADVERTISEMENT

ರಾಜ್ಯ ಬಜೆಟ್: ಸಿಹಿ-ಕಹಿ ಮಾತು

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 8:49 IST
Last Updated 13 ಜುಲೈ 2013, 8:49 IST

ಕೊಪ್ಪಳ: ರಾಜ್ಯದ ಮರು ಬಜೆಟ್ ಬಗ್ಗೆ ಜಿಲ್ಲೆಯ ವಿವಿಧ ಗಣ್ಯರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರ ದೃಷ್ಟಿಯಲ್ಲಿ ಚುನಾವಣಾ ಕೇಂದ್ರಿತ, ರೈತವಿರೋಧಿ, ನಿರಾಶಾದಾಯಕ ಬಜೆಟ್ ಎಂದಿದ್ದರೆ, ಹಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ನಿರಾಶಾದಾಯಕ ಬಜೆಟ್: ಇದು ಮುಂದಿನ ಲೋಕಸಭಾ ಚುನಾವಣೆಯನ್ನು ಕೇಂದ್ರೀಕರಿಸಿ ರೂಪಿಸಿದ ಬಜೆಟ್. ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೃಷಿ ಕ್ಷೇತ್ರಕ್ಕೆ ರೂ 11 ಸಾವಿರ ಕೋಟಿ ಮೀಸಲಿಟ್ಟಿದ್ದರು. ಈ ಬಾರಿ 9,800 ಕೋಟಿ ಮೀಸಲಿಟ್ಟಿದ್ದಾರೆ. ಹಿಂದಿನ ಬಾರಿಗೆ ಹೋಲಿಸಿದರೆ ಈ ಮೊತ್ತ ಕಡಿಮೆ ಆಗಿದೆ. ರಾಜ್ಯದಲ್ಲಿ ಕೃಷಿ ಮತ್ತು ನೀರಾವರಿ ಆದ್ಯತಾ ವಲಯ ಆಗಬೇಕಿತ್ತು. ಸುವರ್ಣ ಭೂಮಿ ಯೋಜನೆ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಹಲವು ಜನಪರ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಬಜೆಟ್‌ನಿಂದ ನಮಗೆ ನಿರಾಶೆಯಾಗಿದೆ.
ಕರಡಿ ಸಂಗಣ್ಣ, ಮಾಜಿ ಶಾಸಕ ಕೊಪ್ಪಳ.

ಹರ್ಷವಾಗಿದೆ
ಹಿಂದುಳಿದ ಜಿಲ್ಲೆಯನ್ನು ಗುರುತಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು, ಕೆರೆಗಳ ಮರುಪೂರಣ ಇತ್ಯಾದಿಗೆ ಆದ್ಯತೆ ಕೊಟ್ಟಿರುವುದು ಸಂತಸ ತಂದಿದೆ. ಅದೇ ರೀತಿ ಹೈದರಾಬಾದ್-ಕರ್ನಾಟಕಕ್ಕೆ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಜಾರಿಯಾದಾಗ ಇನ್ನಷ್ಟು ಅನುದಾನ, ಸೌಲಭ್ಯ ಸಿಗಲಿದೆ. ಜಿಲ್ಲೆಗೆ ಸಣ್ಣ ಕೈಗಾರಿಕೆ, ಉದ್ಯಮಗಳು ಇನ್ನಷ್ಟು ಬರಬೇಕು. ಅದಕ್ಕೆ ಈ ಬಾರಿ ಕೈಗಾರಿಕೆಗೆ ಮೀಸಲಾದ ನಿಧಿಯಲ್ಲಿ ಇನ್ನಷ್ಟು ನೆರವು, ಆದ್ಯತೆ ಸಿಗಬೇಕು. ಒಟ್ಟಿನಲ್ಲಿ ಹರ್ಷದಾಯಕ ಬಜೆಟ್.
ಕೆ.ಎಸ್.ಗುಪ್ತಾ, ಅಧ್ಯಕ್ಷ ಚೇಂಬರ್ ಆಫ್  ಕಾಮರ್ಸ್

ಉತ್ತಮ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ಮುಂದುವರಿಸಿದ್ದಾರೆ. ಇದನ್ನು ನೋಡಿದರೆ ಅವರು ದ್ವೇಷದ ರಾಜಕಾರಣ ಮಾಡಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ರೂ 18,900 ಕೋಟಿ ಕೊಟ್ಟದ್ದು ಒಳ್ಳೆಯದು. ಕುಡಿಯುವ ನೀರು, ಕೆರೆ ಜಲ ಮರುಪೂರಣಕ್ಕೆ ಆದ್ಯತೆ ಕೊಟ್ಟಿದ್ದಾರೆ. ಜಿಲ್ಲೆಯಮಟ್ಟಿಗೆ ಇದು ಆಗಲೇಬೇಕಾದ ಕೆಲಸ. ರೂ 2 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಿರುವುದು ಒಳ್ಳೆಯ ಕ್ರಮ. ಮಠ ಮಾನ್ಯಗಳಿಗೆ ಹಣ ನಿಗದಿಪಡಿಸಿಲ್ಲ. ಇಂಥ ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಿದ್ದಾರೆ. ಆದರೂ ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಕಡಿಮೆಯಾಯಿತು.
ಮಹಾಂತೇಶ್ ಕೊಟಬಾಳ್, ರೈತಪರ    ಹೋರಾಟಗಾರ

`ಸಹಕಾರಿ ವಲಯಕ್ಕೆ ಆದ್ಯತೆ'
`ಸಹಕಾರಿ ಕ್ಷೇತ್ರಕ್ಕೆ ಆದ್ಯತೆ ನೀಡದ ರಾಜ್ಯ ಬಜೆಟ್ ನಿರಾಶದಾಯವಾಗಿದೆ. ಸಹಕಾರ ವಲಯವನ್ನು ದುರುಪಯೋಗಪಡಿಸಿಕೊಂಡು ಆಯ್ಕೆಯಾಗುವ ಬಹುತೇಕ ರಾಜಕಾರಣಿಗಳು ಅವುಗಳ ಅಭಿವೃದ್ಧಿಗೆ ಕಳಕಳಿ ತೋರದಿರುವುದು ವಿಪರ್ಯಾಸವಾಗಿದೆ. ಮೂಲತಃ ಸಹಕಾರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರಿ ಕ್ಷೇತ್ರದ ಅಭ್ಯುದಯಕ್ಕೆ ಕಾರ್ಯಕ್ರಮವನ್ನು ರೂಪಿಸದಿರುವುದು ಅವರಲ್ಲಿ ಸಮಗ್ರತೆಯ ಕೊರತೆಯ ಸಂಕೇತವಾಗಿದೆ. ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ 2ಲಕ್ಷ ಸಾಲ ಕೊಡಿಸಲು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಆವರ್ತನಿಧಿಯಾಗಿ ಹಣ ನೀಡಲು ಮುತುವರ್ಜಿ ತೋರುವ ಮುಖ್ಯಮಂತ್ರಿಗಳು ತಮ್ಮ ಬಜೆಟ್‌ದಲ್ಲಿ ಸಹಕಾರಿ ಸಂಸ್ಥೆಗಳ ಬಲವರ್ದನೆಗೆ ಯಾವುದೇ ಅನುದಾನ ನೀಡದಿರುವುದು ಖೇದದ ಸಂಗತಿಯಾಗಿದೆ. ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೊಳಿಸುವಲ್ಲಿ  ವಿಫಲವಾಗಿರುವ ಸದ್ರಿ ಬಜೆಟ್ ಕಾಟಾಚಾರಕ್ಕೆ ಸಿದ್ದಗೊಂಡಿದೆ.
-ಮುನಿಯಪ್ಪ ಹುಬ್ಬಳ್ಳಿ. ಯಲಬುರ್ಗಾ

`ಗ್ರಾಮೋದಯ ಕೈಬಿಟ್ಟಿದ್ದು ಸರಿಯಲ್ಲ'
`ಗ್ರಾಮಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ತೋರದ ರಾಜ್ಯ ಬಜೆಟ್ ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿದಂತಿದೆ. ಯಾವುದೇ ರೀತಿಯ ಹೊಸತನ ಇಲ್ಲದ ಈ ಬಜೆಟ್‌ದಲ್ಲಿ ಕೊಪ್ಪಳ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ಪ್ರಾದೇಶಿಕ ಅಸಮಾನತೆಗೆ ಮುನ್ನುಡಿ ಬರೆದಂತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಈ ಪ್ರಥಮ ಬಜೆಟ್‌ದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯನ್ನು ಕೈಬಿಡುವ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಯುವ ಜನಾಂಗ ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ಇದೊಂದು ಜನಪರವಾಗದೇ ತೋರಿಕೆಯ ಬಜೆಟ್‌ಆಗಿದೆ.
 -ನವೀನ ಗುಳಗಣ್ಣವರ್. ಇಟಗಿ ಮುಖಂಡರು, ಬಿಎಸ್‌ಆರ್ ಕಾಂಗ್ರೆಸ್

ಬಜೆಟ್‌ನಲ್ಲಿ ವಿಶೇಷತೆ ಏನೂ ಇಲ್ಲ
ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಹೇಳಿಕೊಳ್ಳುವಂತ ಯಾವ ವಿಶೇಷತೆಗಳಿಲ್ಲ. ಇದೊಂದು ನಿರಾಶದಾಯಕ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಬಜೆಟ್ ನೀಡುವ ತವಕದಲ್ಲಿ ಮುಖ್ಯಮಂತ್ರಿ ಅಕ್ಕಿ ಗಿರಣಿಗಳ ಮೇಲೆ ಅಧಿಕ ತೆರಿಗೆಯ ಲೇವಿ ಹೇರಿ ಹೊರೆ ಮಾಡುತ್ತಾರೆ ಎಂಬ ಆತಂಕವಿತ್ತು. ಅಕ್ಕಿ, ಬತ್ತದ ಮೇಲಿನ ತೆರಿಗೆ ಯಥಾಸ್ಥಿತಿ ಉಳಿಸಿ ಅಕ್ಕಿ ಗಿರಣಿ ಮಾಲೀಕರಿಗೆ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆ ಜಾರಿ ನಿರೀಕ್ಷಿಸಿದಷ್ಟು ಸುಲಭವಲ್ಲ. ಸಮರ್ಪಕ ಅನುಷ್ಠಾನ ಸವಾಲಿನ ಕೆಲಸವಾಗಿದ್ದು ನಾಲ್ಕಾರು ತಿಂಗಳು ಕಳೆದ ಬಳಿಕವೇ ಸಿದ್ದರಾಮಯ್ಯ ಅವರ ಭಾಗ್ಯ ಏನೆಂದು ಗೊತ್ತಾಗಲಿದೆ ಎಂದರು.  
ಮಾಜಿ ಶಾಸಕ ಪರಣ್ಣ ಮುನವಳ್ಳಿ

ಸ್ವಾಗತಾರ್ಹ
ಗಂಗಾವತಿ:
ರಾಜ್ಯ ಬಜೆಟ್, ಅಕ್ಕಿ ಗಿರಣಿ ಮಾಲಿಕರಿಗೆ ಅಷ್ಟೇನು ಪ್ರಯೋಜನಕಾರಿಯಾಗಿಲ್ಲ ಎಂಬ ಒಂದಂಶ ಬಿಟ್ಟರೆ ಮಿಕ್ಕುಳಿದಂತೆ ಎಲ್ಲ ಅಂಶಗಳು ಸ್ವಾಗತಾರ್ಹ ಎಂದು ಅಕ್ಕಿ ಗಿರಣಿಮಾಲೀಕರ ತಾಲ್ಲೂಕು ಸಂಘದ ಅಧ್ಯಕ್ಷ ಎನ್. ಸೂರಿಬಾಬು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊರ ರಾಜ್ಯಕ್ಕೆ ಅಕ್ಕಿ ಅಥವಾ ಬತ್ತ ಸಾಗಾಣಿಕೆ ಮೇಲೆ ನಿಯಂತ್ರಣ ಹೇರಿ ಲೇವಿ ರೂಪದಲ್ಲಿ ಅಕ್ಕಿ ಸಂಗ್ರಹಿಸುವ ಮೂಲಕ ನೆರೆಯ ಆಂಧ್ರಪ್ರದೇಶದಲ್ಲಿನ ಮಾದರಿ ಯೋಜನೆಯನ್ನು ಜಾರಿಗೆ ತಂದಿದ್ದರೆ `ಅನ್ನಭಾಗ್ಯ'ಕ್ಕೆ ಹೆಚ್ಚಿನ ಅಕ್ಕಿ ಸಂಗ್ರಹಿಸಬಹುದ್ದಿತ್ತು.

ಅಕ್ಕಿ ಮತ್ತು ಬತ್ತವನ್ನು ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡುವುದರ ಮೇಲೆ ನಿಯಂತ್ರಣ ಮಾಡಿದ್ದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶ, ಸಂಪನ್ಮೂಲ ಸೃಷ್ಟಿಗೆ ಪ್ರೇರಣೆ ನೀಡಿದಂತಾಗುತಿತ್ತು. ಒಟ್ಟಾರೆ ಬಜೆಟ್ ಉತ್ತಮವಾಗಿದೆ ಎಂದರು.
ಅಕ್ಕಿ ಗಿರಣಿಮಾಲೀಕರ ತಾಲ್ಲೂಕು ಸಂಘದ ಅಧ್ಯಕ್ಷ ಎನ್. ಸೂರಿಬಾಬು

ಕೃಷ್ಣ ಕೊಳ್ಳಕ್ಕಿಲ್ಲ ಆದ್ಯತೆ
ಬಜೆಟ್‌ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷಿಸಲಾಗಿದೆ. ಕೃಷ್ಣ ಕೊಳ್ಳದ ಯೋಜನೆಗೆ ಆದ್ಯತೆ ನೀಡಿಲ್ಲ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ಸಿನ ಬಜೆಟ್‌ನಲ್ಲಿ ಹೇಳಿಕೊಳ್ಳುವಂತ ವಿಶೇಷತೆ ಏನೂ ಇಲ್ಲ ಎಂದು ಶ್ರೀರಾಮನಗರದ ರೈತ ಮುಖಂಡ ಸತ್ಯನಾರಾಯಣ ದೇಶಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿಬಾಂಡ್, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕೈಬಿಡುವ ಮೂಲಕ ಬಡ ವರ್ಗದ ಮೇಲೆ ಹೊರೆ ಹೊರಿಸಲಾಗಿದೆ. ಬಜೆಟ್‌ನಲ್ಲಿ ರೈತರಿಗಾಗಿ ಪ್ರತ್ಯೇಕ ಯೋಜನೆಗಳೇನನ್ನೂ ಮಂಡಿಸಿಲ್ಲ.

ರೂ,1.20ಲಕ್ಷ ಕೋಟಿ ಮೊತ್ತದ ಹಿಂದಿನ ಬಜೆಟ್‌ಗೆ ಸ್ವಲ್ಪ ಬಣ್ಣ ಬಳಿದು ಬಜೆಟ್ ಗಾತ್ರವನ್ನು ರೂ, 1.25ಲಕ್ಷ ಕೋಟಿಗೇರಿಸಿದ್ದು ಬಿಟ್ಟರೆ ರೈತರಿಗೆ ವರವಾಗುವ, ಕೃಷಿ ಸಂಬಂಧಿ ಚಟುವಟಿಕೆಗೆ ಪ್ರೇರಕವಾಗಬಲ್ಲ ಯೋಜನೆಗಳಿಲ್ಲ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.