ADVERTISEMENT

ರೈಲು ದುರಂತಕ್ಕೆ ಬಲಿ; ಕಂಬನಿ ಮಿಡಿದ ಜನತೆ

​ಪ್ರಜಾವಾಣಿ ವಾರ್ತೆ
Published 26 ಮೇ 2012, 8:20 IST
Last Updated 26 ಮೇ 2012, 8:20 IST

ಯಲಬುರ್ಗಾ: ಆಂಧ್ರಪ್ರದೇಶದ ಪೆನಕೊಂಡ ಬಳಿ ನಡೆದ ಹಂಪಿ ಏಕ್ಸ್‌ಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟಿರುವ ಯಲಬುರ್ಗಾ ಪಟ್ಟಣದ ಯುವಕ ಮಂಜುನಾಥ ಸವಣೂರು ಅವರ ಮೃತ ದೇಹವನ್ನು ಶುಕ್ರವಾರ ಬೆಳಿಗ್ಗೆ ಪಟ್ಟಣಕ್ಕೆ ತರಲಾಯಿತು.

ಗುರುವಾರ ರಾತ್ರಿಯಿಂದಲೇ ಮೃತದೇಹದ ನಿರೀಕ್ಷೆಯಲ್ಲಿಯೇ ರಾತ್ರಿಯಿಡಿ ಕಾಯುತ್ತಿದ್ದ ಹೆಂಡತಿ ಸರೋಜ ಹಾಗೂ ಕುಟುಂಬದ ಇತರೆ ಸದಸ್ಯರು, ಶುಕ್ರವಾರ ಸಹೋದರರು ಮೃತ ದೇಹವನ್ನು ಪಡೆದುಕೊಳ್ಳುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬದವರೊಂದಿಗೆ ಅಕ್ಕಪಕ್ಕದ ಮನೆಯವರು ಕಣ್ಣೀರಿಟ್ಟರು.

ಆ ಹೊತ್ತಿಗೆ ದೂರದ ಸ್ಥಳದ ಸಂಬಂಧಿಗಳು ಹಾಗೂ ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರ ಹಿನ್ನೆಲೆಯಲ್ಲಿ ಅರ್ಧ ಗಂಟೆಯೊಳಗೆ ಅಂತ್ಯಕ್ರಿಯೆಗೆ ಬೇಕಾದ ಎಲ್ಲ ಅಗತ್ಯತೆಗಳನ್ನು ಕೈಗೊಂಡು ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಿದರು.

ಹೆಣ್ಣು ಮಗುವಿನ ತಂದೆಯಾಗಿದ್ದ ಮೃತ ಮಂಜುನಾಥ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಮನೆಯ ನಿರ್ವಹಣೆಗಾಗಿ ಬೇರೆ ಕಡೆಗೆ ಹೋಗಿ ದುಡಿದು ಹಣ ತರುತ್ತಿದ್ದರು. ಬೆಂಗಳೂರಿಗೆ ಹೋಗುವುದು ಬೇಡ ಊರಲ್ಲಿಯೇ ಇದ್ದು ಅಲ್ಲಲ್ಲಿ ದುಡಿದು ಕುಟುಂಬದೊಂದಿಗೆ ಇರುವಂತೆ ಸಾಕಷ್ಟು ಸಲ ಹೇಳಿತ್ತಿದ್ದರೂ ಅವರ ಮಾತನ್ನು ಲೆಕ್ಕಿಸದೇ ಯಾರಿಗೂ ಹೇಳದೇ ಬೆಂಗಳೂರಿಗೆ ಹೋಗಿದ್ದರ ಬಗ್ಗೆ ಮೃತ ಮಂಜುನಾಥನ ಸಹೋದರರು ಸೇರಿದ್ದ ಜನರ ಮುಂದೆ ಆಡಿಕೊಳ್ಳುತ್ತಿದ್ದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಅಮರಪ್ಪ ಕಲಬುರ್ಗಿ ಹಾಗೂ ಓಣಿಯ ಗಣ್ಯರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಮನೆಗೆ ಆಧಾರವಾಗಿದ್ದ ಮಂಜುನಾಥನ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡುವುದರ ಜೊತೆಗೆ ವಿವಿಧ ರೀತಿಯ ಸರ್ಕಾರಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಗಣ್ಯರು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.