ADVERTISEMENT

ರೋಗಿಯಿಂದ ಹಣ ಪಡೆದ ಸರ್ಕಾರಿ ವೈದ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:33 IST
Last Updated 24 ನವೆಂಬರ್ 2017, 8:33 IST

ಗಂಗಾವತಿ: ಅಪೆಂಡಿಕ್ಸ್‌ನಿಂದ ಬಳಲಿ ಇಲ್ಲಿನ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಬಾಲಕನನ್ನು ಈಚೆಗೆ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆಗೆ ವೈದ್ಯರು ₹ 8 ಸಾವಿರ ಶುಲ್ಕ ಪಡೆದಿದ್ದಾರೆ’ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿಯ ಲಿಂಗದಳ್ಳಿ ಗ್ರಾಮದ ಮೌನೇಶ ಶರಣಪ್ಪ (13) ಸೋಮವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾದವನು. ಮಕ್ಕಳ ತಜ್ಞ ಡಾ.ಜುಬೇದ್‌ ಅಹಮದ್‌ ತಮ್ಮ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿದ ಆರೋಪಕ್ಕೊಳಗಾದವರು. ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ವೈದ್ಯರು ಮತ್ತೆ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಪ್ರಕರಣದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ್ ಅವರ ಮುಂದೆ ಪಾಲಕರು ಹಾಗೂ ಮಕ್ಕಳ ವಾರ್ಡ್‌ನ ಇತರ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಯ ಮಾಹಿತಿ ನೀಡಿದರು.

ADVERTISEMENT

‘ಸರ್ಕಾರಿ ಆಸ್ಪತ್ರೆ ಈಚೆಗೆ ಸುಸಜ್ಜಿತಗೊಂಡಿದ್ದು, ಅಧುನಿಕ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ವೈದ್ಯರು ಹಣಕ್ಕಾಗಿ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳನ್ನು ಪೀಡಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಖಾಸಗಿ ಆಸ್ಪತ್ರೆಗೆ ಬರುವಂತೆ ಸೂಚನೆ ನೀಡುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ರೋಗಿಯೊಬ್ಬರ ಬಂಧು ಶರಣೇಗೌಡ ಹುಲಸನಹಟ್ಟಿ ಒತ್ತಾಯಿಸಿದರು.

ಬಳಿಕ ಶಾಂತಾನಾಯಕ್, ಆಸ್ಪತ್ರೆಯ ವಿವಿಧ ವಾರ್ಡ್‌ಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸೌಲಭ್ಯ, ಕೊರತೆಗಳ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು. ಈ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ರಾಮಕೃಷ್ಣ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.