ADVERTISEMENT

ರೋಹಿಣಿ ಸೆಪಟ್‌ ಅಧಿಕಾರ ಸ್ವೀಕಾರ: ಜಿಲ್ಲೆಗೆ ಪ್ರಥಮ ಮಹಿಳಾ ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 6:25 IST
Last Updated 4 ಮಾರ್ಚ್ 2014, 6:25 IST

ಕೊಪ್ಪಳ: ಜಿಲ್ಲೆಯ ನೂತನ, ಮೊದಲ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿ­ಯಾಗಿ ರೋಹಿಣಿ ಸೆಪಟ್‌ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಬೆಳಿಗ್ಗೆ ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಅವರನ್ನು ಪೊಲೀಸ್‌ ಸಂಪ್ರದಾಯದ ಪ್ರಕಾರ ಸ್ವಾಗತಿಸಲಾಯಿತು.

ರೋಹಿಣಿ ಅವರು ಮೂಲತಃ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯವರು. ವೈದ್ಯಕೀಯ (ಎಂಬಿಬಿಎಸ್‌) ಪದವೀಧರೆ. ಅವರ ಪತಿ ರಾಮನಿವಾಸ್‌ ಸೆಪಟ್‌ ಅವರು ವಿಜಾಪುರ ಜಿಲ್ಲಾ ಎಸ್‌ಪಿಯಾಗಿದ್ದಾರೆ.

ರೋಹಿಣಿ 2008–09ನೇ ಸಾಲಿನ ಐಪಿಎಸ್‌ ಬ್ಯಾಚ್‌ನ ಅಧಿಕಾರಿ. 2011­ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಹಾಯಕ ಪೊಲೀಸ್‌ ವರಿಷ್ಠಾಧಿ­ಕಾರಿ­ಯಾಗಿ, ಅದರ ಬಳಿಕ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಎಎಸ್‌ಪಿಯಾಗಿ ಕಾರ್ಯ­ನಿರ್ವ­ಹಿಸಿದ್ದರು. ಎರಡು ವರ್ಷದ ಹಿಂದೆ ಬಡ್ತಿ ಹೊಂದಿ ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆ­ಗೊಂಡರು. ಈ ಅವಧಿಯಲ್ಲಿ 16 ಅಂತರರಾಜ್ಯ ಡಕಾಯಿತಿ ಪ್ರಕರಣಗಳನ್ನು ಭೇದಿಸಿದ್ದರು. ಪುತ್ತೂರಿನಲ್ಲಿ ಎಎಸ್‌ಪಿ­ಯಾಗಿದ್ದಾಗ ರಾಮಕೃಷ್ಣ ಕೊಲೆ ಪ್ರಕರಣ, ಪೆಟ್ರೋಲ್‌ ಪೈಪ್‌ಲೈನ್‌ನಿಂದ ಪೆಟ್ರೋಲ್‌ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣದ ಜತೆಗೆ ಪೊಲೀಸ್‌ – ಸಮುದಾಯ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ನೂತನ ಎಸ್‌ಪಿ ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ರೋಹಿಣಿ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.