ADVERTISEMENT

ಲಕ್ಷಾಂತರ ಮೌಲ್ಯದ ಔಷಧ ಮೂಟೆಗಳಿಗೆ ಬೆಂಕಿ

ಕೃಷಿ ಇಲಾಖೆ ನಿರ್ಲಕ್ಷ್ಯ: ರೈತರಿಗೆ ದೊರೆಯದ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 7:09 IST
Last Updated 18 ಜುಲೈ 2013, 7:09 IST
ಕುಷ್ಟಗಿ ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದ ತೋಟದಲ್ಲಿ ಕೃಷಿ ಇಲಾಖೆಗೆ ಸೇರಿದ ಔಷಧ ಇತರೆ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು ಬುಧವಾರ ಕಂಡುಬಂದಿತು
ಕುಷ್ಟಗಿ ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದ ತೋಟದಲ್ಲಿ ಕೃಷಿ ಇಲಾಖೆಗೆ ಸೇರಿದ ಔಷಧ ಇತರೆ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು ಬುಧವಾರ ಕಂಡುಬಂದಿತು   

ಕುಷ್ಟಗಿ: ರೈತರಿಗೆ ವಿತರಿಸುವ ಸಲುವಾಗಿ ಸರ್ಕಾರ ಕೃಷಿ ಇಲಾಖೆಗೆ ಸರಬರಾಜು ಮಾಡಿದ್ದ ವಿವಿಧ ಔಷಧ, ಬೀಜ, ಕ್ರಿಮಿನಾಶಕ ಸೇರಿದಂತೆ ಲಕ್ಷಾಂತರ ಮೌಲ್ಯದ ಸಾಮಗ್ರಿಗಳನ್ನು ಒಳಗೊಂಡ ಮೂಟೆಗಳು ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದ ತೋಟದಲ್ಲಿ ಬುಧವಾರ ಪತ್ತೆಯಾಗಿದ್ದು, ನೂರಾರು ಪಾಕೆಟ್‌ಗಳು ಮತ್ತು ಕ್ರಿಮಿನಾಶಕಗಳ ಬಾಟಲಿಗಳನ್ನು ಸುಟ್ಟು ನಾಶಪಡಿಸಿರುವುದು ಕಂಡುಬಂದಿದೆ.

ಈ ತೋಟ ಇಲ್ಲಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೇವಕನಾಗಿರುವ ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದ ಸೋಮಶೇಖರ ಕೊಳ್ಳಳ್ಳಿಗೆ  ಸೇರಿದೆ. ಮೂಟೆಗಳನ್ನು ಹಾಗೇ ಎಸೆಯಲಾಗಿದೆ. ಇವುಗಳಲ್ಲಿ ಸರ್ಕಾರಿ ಸಂಸ್ಥೆಗೆ ಸೇರಿದ `ಬೀಜರಾಜ' ಚಿಹ್ನೆ ಇರುವ ಹತ್ತಿಬೀಜ, ಕ್ರಿಮಿನಾಶಕ, ಔಷಧಗಳ ನೂರಾರು  ಬಾಟಲಿಗಳು ಇದ್ದು ಬಹುತೇಕ ವಸ್ತುಗಳನ್ನು ಸುಟ್ಟು ಹಾಕಿರುವುದು `ಪ್ರಜಾವಾಣಿ' ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು. ಅಲ್ಲದೇ ಬಹುತೇಕ ಬಾಕ್ಸ್‌ಗಳನ್ನು ಇನ್ನೂ ತೆರೆದಿಲ್ಲ.

ಈ ವಸ್ತುಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ಉಚಿತವಾಗಿ ವಿತರಿಸಲು ಈ ಮೂಟೆಗಳನ್ನು ಸಹಾಯಕ ನಿರ್ದೇಶಕರ ಕಚೇರಿಯ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಪತ್ತೆಯಾಗಿರುವ ಈ ಸಾಮಗ್ರಿಗಳು ಈಗಾಗಲೇ ಅವಧಿ ಮೀರಿದವುಗಳಾಗಿವೆ. ಆದರೆ ಇವುಗಳನ್ನು ರೈತರಿಗೆ ವಿತರಿಸದೇ ಹಾಗೇ ಇಟ್ಟಿರುವುದು, ಗುಪ್ತಸ್ಥಳದಲ್ಲಿ ನಾಶಪಡಿಸಲು ಯತ್ನಿಸಿರುವುದೇಕೆ ಎಂಬ ಪ್ರಶ್ನೆಗೆ ಕೃಷಿ ಇಲಾಖೆ ಸಿಬ್ಬಂದಿ ಸಮರ್ಪಕ ಉತ್ತರ ನೀಡಲಿಲ್ಲ.

ಆದರೆ ತನ್ನ ತೋಟದಲ್ಲಿ ಇವುಗಳನ್ನು ಸುಟ್ಟುಹಾಕಿರುವುದನ್ನು ಒಪ್ಪಿಕೊಂಡ ಸೇವಕ ಸೋಮಶೇಖರ ಕೊಳ್ಳಳ್ಳಿ, `ಗೋದಾಮಿನಲ್ಲಿದ್ದ ವಸ್ತುಗಳನ್ನು ದೂರ ತೆಗೆದುಕೊಂಡು ಹೋಗಿ ನಾಶಪಡಿಸುವಂತೆ ಸಹಾಯಕ ಅಧಿಕಾರಿ ಸೂಚಿಸಿದ್ದರು' ಎಂದು ಸ್ಪಷ್ಟಪಡಿಸಿದರು. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿದರೆ ಸಹಾಯಕ  ನಿರ್ದೇಶಕರು ಸಂಪರ್ಕಕ್ಕೆ ದೊರೆಯಲಿಲ್ಲ.

ಜಂಟಿ ನಿರ್ದೇಶಕರ ಹೇಳಿಕೆ: `ಇಲಾಖೆಯ ಸಾಮಗ್ರಿಗಳನ್ನು ಸುಟ್ಟು ನಾಶ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವಧಿ ಮೀರಿದ ಸಂಗ್ರಹ ಇದ್ದರೆ ಅದನ್ನು ನಾಶಪಡಿಸಲು ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಈ ಬಗ್ಗೆ ವಿವರ ನೀಡುವಂತೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದೇನೆ' ಎಂದು ಕೃಷಿ ಇಲಾಖೆ ಕೊಪ್ಪಳ ಜಿಲ್ಲಾ ಜಂಟಿ ನರ್ದೇಶಕ ಪದ್ಮ ನಾಯಕ್ ತಮ್ಮನ್ನು ಸಂಪರ್ಕಿಸಿದ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.