ಕುಕನೂರು: ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಏಳ್ಗೆಗೆ ವಿದ್ಯಾರ್ಥಿಗಳು ಜೀವಾಳ ಎನ್ನುವ ಸಂಗತಿಯನ್ನು ಯಾರೂ ಅಲ್ಲಗಳೆಯಬಾರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಯ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂಸ್ಥೆಯ 91ನೇ ಹುಟ್ಟು ಹಬ್ಬ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಉದಯವಾದ ಬೆರಳೆಣಿಕೆಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾನಂದ ಗುರುಕುಲವೂ ಒಂದು, ಬ್ರಿಟಿಷರ ವಿರುದ್ಧ ಸಮರ ಸಾರಲು ಹಾಗೂ ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ದೇಶಾಭಿಮಾನ ಬೆಳೆಸಲು ಆರಂಭವಾದ ಸಂಸ್ಥೆಯು ಅಲ್ಲಿಂದ ಇಲ್ಲಿಯವರೆಗೂ ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ.
ಆದಾಗ್ಯೂ ಕೂಡ ಸಾಮಾಜಿಕ, ರಾಜಕೀಯ ಹಾಗೂ ವಿಭಿನ್ನ ವಿಚಾರಗಳು ಸಂಸ್ಥೆಯ ಅಭಿವೃದ್ಧಿ ಕುಂಠಿತಗೊಂಡಿತ್ತು. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಂಸ್ಥೆಯನ್ನು ಮುನ್ನೆಡೆಸುವ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆಯುವಂತಾಗಿದ್ದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ದೇಸಾಯಿ ಅವರ ವಿಶಿಷ್ಟ ಸೇವೆಯೇ ಕಾರಣ.
ಅಂತಹ ಮಹನೀಯರನ್ನು ಸಂಸ್ಥೆ ಎಂದೂ ಮರೆಯಬಾರದು ಎಂದು ಸ್ಮರಿಸಿದ ಅವರು, ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯನ್ನು ಸ್ವತಂತ್ರ ವಿಶ್ವ ವಿದ್ಯಾಲಯವನ್ನಾಗಿ ಮಾಡಬೇಕೆಂದು ದಿ.ಎಸ್.ಎಸ್.ದೇಸಾಯಿ ಅವರು ಕನಸು ಕಂಡಿದ್ದರು. ಅವರ ಕಂಡ ಕನಸನ್ನು ಸಾಕಾರಗೊಳಿಸಲು ಈಗಿನ ಪದಾಧಿಕಾರಿಗಳು ಶ್ರಮ ವಹಿಸಬೇಕಾಗಿದೆ ಎಂದರು. ನಿವ್ಥತ್ತ ಶಿಕ್ಷಕ ಎಸ್.ಆರ್.ದೇಸಾಯಿ ಸಂಸ್ಥೆಯ ಧ್ವಜಾರೋಹಣ ನೆರವೇರಿಸಿದರು.
ಪ್ರಾಚಾರ್ಯ ಹಾಗೂ ಕಾರ್ಯದರ್ಶಿ ಕೆ.ಪಿ.ಮುರಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಶಿಕ್ಷಕ ಎ.ಪಿ.ಮುಧೋಳ, ಡಾ.ಜಿ.ಎಸ್.ಮೇಲ್ಕೋಟೆ ಪಾಲಿಟೆಕ್ನಿಕ್ ಪ್ರಾಚಾರ್ಯ ಎನ್.ಆರ್.ಕುಕನೂರು, ಪ್ರೌಢಶಾಲೆ ಉಪ ಪ್ರಚಾರ್ಯ ಎಸ್.ಎಲ್.ಲಮಾಣಿ, ಪ್ರಾಥಮಿಕ ವಿಭಾಗದ ಡಿ.ಆರ್.ಕುಲಕರ್ಣಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ದೈಹಿಕ ಶಿಕ್ಷಕರಾದ ಎಚ್.ಬಿ.ಹಳೆಗೌಡ್ರ, ಆರ್.ಎಂ.ದೇವರಡ್ಡಿ, ಚಂದ್ರಶೇಖರ್ ತೋಟದ ಅವರ ನೇತೃತ್ವದಲ್ಲಿ ನಗರದಲ್ಲಿ ಪ್ರಭಾತಪೇರಿ ಹಮ್ಮಿಕೊಳ್ಳಲಾಗಿತ್ತು. ನಂತರದಲ್ಲಿ ಸಂಸ್ಥೆಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.