ADVERTISEMENT

ವಿಳಂಬ: ಅಧಿಕಾರಿ, ಅಧ್ಯಕ್ಷರು ತರಾಟೆಗೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 8:40 IST
Last Updated 13 ಜುಲೈ 2013, 8:40 IST

ಕನಕಗಿರಿ: ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ಕಾರ್ಯಾಗಾರವನ್ನು ಮುಂದೂಡುವಂತೆ ಆಗ್ರಹಿಸಿ ಗ್ರಾಪಂ ಸದಸ್ಯರು ಹಾಗೂ ರೈತರು ಪಟ್ಟು ಹಿಡಿದ ಘಟನೆ ನಡೆಯಿತು.

ಗ್ರಾಮ ಪಂಚಾಯಿತಿ, ಕೃಷಿ, ತೋಟಗಾರಿಕೆ ಇತರೆ ಇಲಾಖೆಗಳ ಆಶ್ರಯದಲ್ಲಿ ರೈತರ ಕಾರ್ಯಾಗಾರವನ್ನು ಬೆಳಿಗ್ಗೆ 11ಗಂಟೆಗೆ ನಿಗದಿಗೊಳಿಸಲಾಗಿತ್ತು. ಕನಕಗಿರಿ ಹೋಬಳಿ ವ್ಯಾಪ್ತಿಯ ರೈತರು, ಜನಪ್ರತಿನಿಧಿಗಳು ಸಭೆಗೆ ಆಗಮಿಸಿದ್ದರು.

ಸಮಯ 1ಗಂಟೆಯಾದರೂ ಕಾರ್ಯಕ್ರಮ ಆರಂಭಗೊಳ್ಳಲಿಲ್ಲ. ತಾಳ್ಮೆ ಕಳೆದುಕೊಂಡ ರೈತರು, ಗ್ರಾಪಂ ಸದಸ್ಯರು ಕಾರ್ಯಕ್ರಮ ವಿಳಂಬ ಕುರಿತು ಜಿಪಂ ಉಪ ಕಾರ್ಯದರ್ಶಿ ರವಿ ಬಿಸರಳ್ಳಿಯೊಂದಿಗೆ ವಾಗ್ವಾದ ನಡೆಸಿದರು.

ಜಿಪಂ ಅಧ್ಯಕ್ಷ ಟಿ. ಜರ್ನಾದನ ಅವರ ಬರುವಿಕೆಗಾಗಿ ಕಾಯುತ್ತಿದ್ದೇವೆ, ಇನ್ನೂ ಸ್ವಲ್ಪ ಹೊತ್ತು ತಡೆಯಿರಿ ಎಂದು ಅಧಿಕಾರಿಗಳು ವಿನಂತಿಸಿದರೂ ರೈತರು ಸಭೆಯಿಂದ ಹೊರ ನಡೆದರು.

ಜಿಪಂ ಅಧ್ಯಕ್ಷ ಟಿ. ಜರ್ನಾದನ ಅವರಿಗೆ ಸಮಯ ಪ್ರಜ್ಞೆ ಇಲ್ಲ, ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ಅವರು ಖಾಸಗಿ ಕಾರ್ಯಕ್ರಮಕ್ಕೆ ತೆರಳಿ ಸಮಯವನ್ನು ಹಾಳು ಮಾಡಿದ್ದಾರೆ,  
   
ರೈತಾಪಿಗಳು ಅಧಿಕಾರಿಗಳು, ಜಿಪಂ ಅಧ್ಯಕ್ಷ ಟಿ. ಜರ್ನಾದನ ಅವರ ದಾರಿ ಕಾದು ಸುಸ್ತಾಗಿ ಮನೆಗೆ ಹೋಗಿದ್ದಾರೆ, ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ಮಾಡುತ್ತೀರಿ ಎಂದು ಗ್ರಾಪಂ ಸದಸ್ಯರಾದ ಸಣ್ಣ ಕನಕಪ್ಪ, ಹಿರೇಖೇಡ ಗ್ರಾಪಂ ಸದಸ್ಯರಾದ ಮುದುಕೇಶ, ಜಂಬಣ್ಣ ಹಾಗೂ ವಿವಿಧ ರೈತರು ಅಧಿಕಾರಿ ರವಿ ಬಿಸರಳ್ಳಿ, ಗ್ರಾಪಂ ಅಧಿಕಾರಿ ಮಲ್ಲಿಕಾರ್ಜುನ ಕಡಿವಾಳರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರೈತರು ಇಲ್ಲದಿರುವಾಗ ಕಾರ್ಯಾಗಾರ ಮಾಡಿ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.

1.30 ಗಂಟೆಗೆ ಆಗಮಿಸಿದ ಜಿಪಂ ಅಧ್ಯಕ್ಷರನ್ನು ಬಿ. ಕನಕಪ್ಪ, ಟಿ. ಜೆ. ಶ್ರೀನಿವಾಸ ತರಾಟೆಗೆ ತೆಗೆದುಕೊಂಡರು. ಆದ ಪ್ರಮಾದಕ್ಕೆ ಕ್ಷಮೆಯಾಚಿಸಿದ ನಂತರ ಕಾರ್ಯಕ್ರಮ ಆರಂಭವಾಯಿತಾದರೂ ಬಹು ಸಂಖ್ಯೆಯಲ್ಲಿ ರೈತರು ಇರಲಿಲ್ಲದಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.