ADVERTISEMENT

ವಿವಿಧೆಡೆ ಉಚಿತ ಸೈಕಲ್ ವಿತರಣೆ: ಶಾಲಾ ಅಂಗಳದಲ್ಲಿ ಟ್ರಿಣ್ ಟ್ರಿಣ್... ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:30 IST
Last Updated 8 ಅಕ್ಟೋಬರ್ 2011, 9:30 IST

ಗಂಗಾವತಿ: ತಾಲ್ಲೂಕಿನ ಬಸವಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಮಕ್ಕಳಿಗೆ ಮಂಜೂರಾದ ಬೈಸಿಕಲ್‌ಗಳನ್ನು ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ವಿತರಿಸಿದರು. 

ಆನೆಗೊಂದಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು, ಬಸವಪಟ್ಟಣ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಶರಣೇಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. 

ಬಸವಪಟ್ಟಣದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಶುರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಮುಖ್ಯಗುರು ಕೆ. ನಾಗಲಿಂಗಪ್ಪ, ಡಿ. ರವಿರಾಮ್, ಗ್ರಾ.ಪಂ. ಸದಸ್ಯರಾದ ಸರಿಗಮ ಹನುಮಂತಪ್ಪ, ಮನೋಹರ, ಶೂರಿಕುಮಾರಿ, ಲಕ್ಷ್ಮಣ ಲಿಂಗದಳ್ಳಿ ಮೊದಲಾದವರಿದ್ದರು.

ಸಿಂಗನಾಳ ಗ್ರಾಮ: ತಾಲ್ಲೂಕಿನ ಸಿಂಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ 2011-12ನೇ ಸಾಲಿನಲ್ಲಿ ಮಂಜೂರಾದ ಬೈಸಿಕಲ್‌ಗಳನ್ನು ವಿತರಿಸುವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯಗುರು ಮಹೆಬೂಬ ನಿಡಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಸದಸ್ಯೆ ಲಕ್ಕಮ್ಮ ಯಂಕನಗೌಡ ಚಕ್ಕಡಂಕನಕಲ್, ಪ್ರಮುಖರಾದ ಸುರೇಶ ಗೋನಾಳ, ವಿರುಪಾಕ್ಷಪ್ಪ ಸಾಹುಕಾರ, ಅಯ್ಯಪ್ಪ ಐನಾಕಿ, ರಂಗಪ್ಪ, ಹನುಮಂತಪ್ಪ, ಸೋಮಣ್ಣ, ಲಕ್ಷ್ಮಣ, ಚನ್ನಪ್ಪ, ಶೇಖರಪ್ಪ ಸಾಹುಕಾರ ಮೊದಲಾದವರಿದ್ದರು.

ಬರಗೂರು ಗ್ರಾಮ: ತಾಲ್ಲೂಕಿನ ಬರಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ತಾಲ್ಲೂಕು ಉತ್ತಮ ಶಿಕ್ಷಕ ಶ್ರೀಶೈಲ ಮರಡಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಳಪ್ಪ ಬಡಿಗೇರ, ಸಿ.ಬಿ. ರೆಡ್ಡಿ, ಎಪಿಎಂಸಿ ಸದಸ್ಯ ದುರ್ಗಾರಾವ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಮಾರೆಪ್ಪ ವಿಭೂತಿ, ಉಪಾಧ್ಯಕ್ಷ ಬಸವನಗೌಡ ಮಾಲಿಪಾಟೀಲ್, ಮುಖ್ಯಗುರು ನರಸಿಂಹಲು, ಅಮರೇಶ ತಳವಾರ ಮೊದಲಾದವರಿದ್ದರು.

ಕನಕಗಿರಿ (ಹಿರೇಖ್ಯಾಡ ಗ್ರಾಮ
): ಪರಿಶಿಷ್ಟ ಪಂಗಡದ ಕಾಲನಿಯ ಸಿಸಿ ರಸ್ತೆ ನಿರ್ಮಾಣಕ್ಕೆ 8 ಲಕ್ಷ ರೂಪಾಯಿ ಸೇರಿದಂತೆ  ಹಿರೇಖ್ಯಾಡ ಗ್ರಾಮದ ವಿವಿಧ ಕಾಮಗಾರಿಗಳಿಗೆ ರೂ. 20 ಲಕ್ಷಕ್ಕೂ ಹೆಚ್ಚು ಅನುದಾನ ನೀಡಲಾಗಿದೆ ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು.

ಸಮೀಪದ ಹಿರೇಖ್ಯಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳ ವಿತರಣೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕುಡಿಯುವ ನೀರಿನ ಪೈಪ್‌ಲೈನ್‌ಗೆ ರೂ 5 ಲಕ್ಷ, ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡಕ್ಕೆ ರೂ, 3.50 ಲಕ್ಷ, ರಂಗಮಂದಿರಕ್ಕೆ ರೂ 2 ಲಕ್ಷ, ಅಂಗನವಾಡಿ ಕಟ್ಟಡಕ್ಕೆ 3.50 ಲಕ್ಷ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.

ಶೈಕ್ಷಣಿಕ ಪ್ರಗತಿಗೆ ಸರ್ಕಾರ ಉಚಿತ ಪಠ್ಯಪುಸ್ತಕ, ಶಾಲಾ ಬ್ಯಾಗ್, ಸೈಕಲ್, ಬಿಸಿಯೂಟ ಸೇರಿ ಇತರೆ ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಪಡೆದುಕೊಂಡು ಹಿಂದುಳಿದ ಹೈದ್ರಾಬಾದ್ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸಬೇಕೆಂದು ಕೋರಿದರು.

ತಂಗಡಗಿ ಟ್ರಸ್ಟ್ ವತಿಯಿಂದ ಕ್ಷೇತ್ರದ 4500 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಡೈಜೆಸ್ಟ್‌ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ ಮಾತನಾಡಿ, ಉತ್ತಮ ಶಿಕ್ಷಣ ಪಡೆಯುವ ಮೂಲಕ   ವಿದ್ಯಾರ್ಥಿಗಳು ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಸಂಸದ ಸೂಗೂರು ಶಿವರಾಮಗೌಡ, ಮುಖ್ಯ ಶಿಕ್ಷಕ ಚೆನ್ನಪ್ಪ ಆರ್. ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನೂರುಸಾಬ ಕನಕಗಿರಿ, ಜಿಲ್ಲಾ ಪಂಚಾಯಿತಿ ಸದಸ್ಯ ವೀರೇಶ ಸಾಲೋಣಿ, ಮಾಜಿ ಸದಸ್ಯ ಹನುಮೇಶ ನಾಯಕ, ತಾಪಂ ಸದಸ್ಯೆ ಸರ್ವಮಂಗಳಾ ಭೂಸನೂರಮಠ, ಗ್ರಾಪಂ ಅಧ್ಯಕ್ಷ ವಿರೂಪಾಕ್ಷಪ್ಪ, ಪ್ರಮುಖರಾದ ಶ್ರೀಧರ ಕೇಸರಹಟ್ಟಿ, ಮಹಾಂತೇಶ ಸಜ್ಜನ್, ನಾಗಪ್ಪ ಹುಗ್ಗಿ, ತಿಮ್ಮನಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶರೆಡ್ಡಿ ಓಣಿಮನಿ, ಗ್ರಾಪಂ ಸದಸ್ಯರಾದ ಮುದುಕೇಶ, ಶಾರದಮ್ಮ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ತಿಪ್ಪಣ್ಣ ಹಾಗೂ ವೆಂಕಟೇಶ ನಿರೂಪಿಸಿದರು.

ಕನಕಗಿರಿ ನಗರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನೂರುಸಾಬ ಸೈಕಲ್ ವಿತರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ, ತಾಪಂ ಸದಸ್ಯೆ ಸರ್ವಮಂಗಳಾ ಭೂಸನೂರಮಠ, ಎಸ್‌ಡಿಎಂಸಿ ಅಧ್ಯಕ್ಷ ಮನೋಹರರೆಡ್ಡಿ ಬೇರ‌್ಗಿ, ಉಪಪ್ರಾಂಶುಪಾಲ ಎಚ್.ಕೆ. ಚಂದ್ರಪ್ಪ, ಎಸ್‌ಡಿಎಂಸಿ ಸದಸ್ಯರು, ಗಣ್ಯರು ಹಾಜರಿದ್ದರು. 

ಹುಲಿಹೈದರ: ಸಮೀಪದ ಹುಲಿಹೈದರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವೀರೇಶ ಸಾಲೋಣಿ ಅವರು ಎಂಟು ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.

ರಾಯಚೂರ ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಹನುಮೇಶ ನಾಯಕ, ಗಂಗಾವತಿ ಎಪಿಎಂಸಿ ಉಪಾಧ್ಯಕ್ಷ ರಾಜಾ ಚಚ್ಚಪ್ಪನಾಯಕ, ಮುಖ್ಯ ಶಿಕ್ಷಕ ಯಲ್ಲಪ್ಪ ಹುಬ್ಬಳ್ಳಿ ಹಾಜರಿದ್ದರು.

ಶಾಂತರಾಮ ಸ್ವಾಗತಿಸಿದರು. ಶಿವಾನಂದ ತಿಮ್ಮಾಪುರ ನಿರೂಪಿಸಿದರು, ಭಾಸ್ಕರ ನಾಯಕ ವಂದಿಸಿದರು.
ಕೇಸರಹಟ್ಟಿ: ಸಮೀಪದ ಕೇಸರಹಟ್ಟಿ ಗ್ರಾಮದ ಗದ್ದಡಕಿ ಲಿಂಗಣ್ಣ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಉಪ್ಪಾರ ಸೈಕಲ್ ವಿತರಣೆ ಮಾಡಿದರು. ಎಸ್‌ಡಿಎಂಸಿ ಗೌರವಾಧ್ಯಕ್ಷ ಚೆನ್ನಪ್ಪ ಮಾಳಗಿ, ಶಾಲೆಯ ಶಿಕ್ಷಕರು ಹಾಜರಿದ್ದರು.

ಹನುಮಸಾಗರ: ಇಲ್ಲಿನ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ಸರ್ವಶಿಕ್ಷಣ ಅಭಿಯಾನದ ಯೋಜನೆಯಡಿಯಲ್ಲಿ ಮಜೂರಾಗಿದ್ದ ವಿದ್ಯಾರ್ಥಿಗಳ ಉಚಿತ ಸೈಕಲ್‌ಗಳನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಸಂಗಯ್ಯ ವಸ್ತ್ರದ ವಿತರಿಸಿದರು.

ಪ್ರಾಚಾರ್ಯ ರಾಜೇಂದ್ರ ಪಂತ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದ್ದರೂ ಗ್ರಾಮಿಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮಾತ್ರ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ವಿ.ಬಿ.ಉಪ್ಪಿನ, ಬಾಲಕಿಯರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಎಂ.ಡಿ.ಮಕಾನದಾರ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಹಾಂತೇಶ ಗೋನಾಳ, ಅಮರೇಶ ತಮ್ಮಣ್ಣವರ, ಜಿಲ್ಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್‌ಕರೀಂ ವಂಟೆಳಿ, ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಜಮಖಂಡಿಕರ, ವಿಶ್ವನಾಥ ನಾಗೂರ, ಕೃಷ್ಣಮೂರ್ತಿ ಭಂಡಾರಿ, ಗುರುರಾಜ ದೇಸಾಯಿ ಮಾತನಾಡಿದರು.

ಸುಮಂಗಲಾ ತರಿಕೇರಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಮ್ಯಾಗೇರಿ ಸ್ವಾಗತಿಸಿದರು. ಗೀತಾ ದೇವಾಂಗಮಠ ಕಾರ್ಯಕ್ರಮ ನಿರೂಪಿಸಿದರು. ಈರೇಶಪ್ಪ ವಂದಿಸಿದರು.

ಕುಷ್ಟಗಿ: ಪಟ್ಟಣದ ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈಚೆಗೆ ಉಚಿತವಾಗಿ ಸೈಕಲ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಮರೇಗೌಡ ಬಯ್ಯಾಪೂರ, ಉಚಿತವಾಗಿ ನೀಡಿದ ಸೈಕಲ್‌ಗಳು ಸದುಪಯೋಗವಾಗಬೇಕು ಎಂದು ಹೇಳಿದರು.

ಹಿರೇಮನ್ನಾಪೂರ ಗ್ರಾಮದ ಮರಿಶಾಂತವೀರ ಮಹಾಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದೇವೇಂದ್ರಗೌಡ ಮಾಲಿಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ದೊಡ್ಡಯ್ಯ ಗದ್ದಡಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಗೋನಾಳ, ಪ್ರಾಚಾರ್ಯ ಎಸ್.ಬಿ.ಹಿರೇಮಠ, ಮುಖ್ಯಶಿಕ್ಷಕ ವಿ.ಆರ್.ಮಠ, ನಾಗಪ್ಪ ಜಗಿಜಿನ್ನಿ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಶಿವಾನಂದ ಹಿರೇಮಠ ಸ್ವಾಗತಿಸಿದರು. ಎಸ್.ಪಿ.ಮಳಿಮಠ ನಿರೂಪಿಸಿದರು. ಎಂ.ಸಿ.ತೋಪಲಕಟ್ಟಿ ವಂದಿಸಿದರು. ಕಳೆದ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ 84 ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.