ADVERTISEMENT

ವಿಶೇಷತೆ ಮೆರೆದ ಯುವಕರು

ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ಸು

ಶ್ರಿನಿವಾಸ ಎಂ.ಬಿ.ಬೆಂಗಳೂರು .
Published 13 ಫೆಬ್ರುವರಿ 2014, 9:50 IST
Last Updated 13 ಫೆಬ್ರುವರಿ 2014, 9:50 IST

ಗಂಗಾವತಿ: ತಾಲ್ಲೂಕಿನ ಶ್ರೀರಾಮ­ನಗರದ ಎಪಿಎಂಸಿ ಪ್ರಾಂಗಣದಲ್ಲಿನ ಚಿದಾನಂದ ಅವಧೂತರ ಮಂಟಪದಲ್ಲಿ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ವೇದಿಕೆಯಲ್ಲಿ ನಡೆದ ಎರಡು ದಿನದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದಕ್ಕೆ ಯುವಕರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ವ್ಯಕ್ತವಾಯಿತು.

ಸಮಾರಂಭದ ಯಶಸ್ವಿಗೆ ಕಾರ­ಣ­ವಾದ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನು ವೇದಿಕೆಗೆ ಆಹ್ವಾನಿಸಿದ ಸಾಹಿತ್ಯ ಪರಿ­ಷತ್ತಿನ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನ ಮಾಡುವಂತೆ  ಮನವಿ ಮಾಡಿದರು.

ಆದರೆ ಉಪ ಸಮಿತಿಯಲ್ಲಿನ ಪದಾಧಿಕಾರಿಗಳು ವೈಯಕ್ತಿಕ ಸನ್ಮಾನ ನಿರಾಕರಿಸಿದರು. ಸಮ್ಮೇಳನದ ಯಶಸ್ವಿಗೆ ಕೇವಲ ಸಂಘಟಕರು, ಉಪ ಸಮಿತಿಯ ಅಧ್ಯಕ್ಷರು ಸದಸ್ಯರು ಮಾತ್ರವಲ್ಲ, ಇಡೀ ಗ್ರಾಮಸ್ಥರು ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲರನ್ನೂ ಬಿಟ್ಟು ಕೇವಲ ಉಪ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸುವುದು ಸರಿಯಲ್ಲ. ಯಶಸ್ಸಿನ ಶ್ರೇಯಸ್ಸು ಇಡೀ ಗ್ರಾಮಸ್ಥರಿಗೆ ಸಲ್ಲಬೇಕು. ಆದ್ದರಿಂದ ‘ಶ್ರೀರಾಮನಗರ’ ಎಂಬ ನಾಮಫಲಕ್ಕೆ ಹೂಮಾಲೆ ಹಾಕಿ’ ಎಂದು ಸಮಿತಿಗಳ ಪರವಾಗಿ ವೇದಿಕೆ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮನವಿ ಮಾಡಿದರು.

ಯುವಕರ ಮನವಿಗೆ ಓಗೊಟ್ಟ ಸಚಿವ ಶಿವರಾಜ ತಂಗಡಗಿ, ‘ಶ್ರೀರಾಮ­ನಗರ’ ಎಂಬ ನಾಮಫಲಕ್ಕೆ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಗ್ರಾಮಕ್ಕೆ ಲಭಿಸಿದ ಮೊದಲ ಕನ್ನಡ­ಮ್ಮನ ಹಬ್ಬದ ಸಮ್ಮೇಳನವನ್ನು ಯಶಸ್ವಿಯಾಗಿಸಿದ ಸಾರ್ಥಕತೆ ಭಾವ ಯುವಕರ ಮುಖದಲ್ಲಿ ಎದ್ದು ಕಾಣುತ್ತಿತ್ತು. 

ಯುವಕರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಸಮ್ಮೇಳನದ ಅಧ್ಯಕ್ಷ ಎಸ್‌.ವಿ. ಪಾಟೀಲ್‌, ಸಣ್ಣ ಸಾಧನೆ ಮಾಡದಿದ್ದರೂ ಸನ್ಮಾನ, ಪ್ರಚಾರಕ್ಕೆ ಹಾತೊರೆಯುವ ಜನರ ಮಧ್ಯೆ ಶ್ರೀರಾಮನಗರಕ್ಕೆ ಸನ್ಮಾನ ಮಾಡಿಸಿದ ಯುವಕರ ಉದಾರಗುಣ ಎಲ್ಲರಿಗೂ ಆದರ್ಶವಾಗಬೇಕು ಎಂದು ಶ್ಲಾಘಿಸಿದರು.

ಅತಿಥಿ ಸತ್ಕಾರ, ಹಣಕಾಸು, ವೇದಿಕೆ, ನಿರೂಪಣೆ, ಸಮಯ ಪಾಲನೆ, ಮೆರವಣಿಗೆ ಸೇರಿದಂತೆ ಸಮ್ಮೇಳನದ ಪ್ರತಿಯೊಂದು ವ್ಯವಸ್ಥೆಗೆ ಪಾದರಸದಂತೆ ಓಡಾಡಿದ, ಅದರಲ್ಲೂ ವಿಶೇಷವಾಗಿ ಸಮ್ಮೇಳನಕ್ಕೆ ಬಂದವರಿಂದ ನಾಲಿಗೆ ಚಪ್ಪರಿಸುವಂತೆ ಊಟದ ವ್ಯವಸ್ಥೆ ಮಾಡಿದ ಯುವಕರ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT