ADVERTISEMENT

ವಿಶೇಷ ಸ್ಥಾನಮಾನಕ್ಕೆ ಜನಾಂದೋಲನ ಅಗತ್ಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 8:40 IST
Last Updated 27 ಫೆಬ್ರುವರಿ 2011, 8:40 IST

ಕುಷ್ಟಗಿ: ಹಳೆಮೈಸೂರು ಭಾಗದ ಭಾಷೆಗೆ ಹೋಲಿಸಿದಾಗ ಹೈದರಾಬಾದ್ ಕರ್ನಾಟಕದ ಭಾಷೆಯಲ್ಲಿ ಮೌಲಿಕತೆ ಅಡಗಿದೆ ಎಂದು ಪತ್ರಕರ್ತ ಗಂಗಾಧರ ಕುಷ್ಟಗಿ ಹೇಳಿದರು. ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಏಕೀಕರಣ ಚಳವಳಿ ಸಂದರ್ಭ ಮತ್ತು ಮುಲ್ಕಿ ಕಾನೂನು ವಂಚಿತ ಹೈದರಾಬಾದ್ ಕರ್ನಾಟಕ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಉಳಿದೆಲ್ಲ ರಾಜ್ಯಗಳಲ್ಲಿ ಹಿಂದುಳಿದ ಭಾಗಗಳಿಗೆ ವಿಶೇಷ ಸ್ಥಾನಮಾನ ದೊರೆತರೆ ಹೈದ್ರಾಬಾದ್ ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತದೆ. ಆರ್ಟಿಕಲ್ 371 ಪ್ರಕಾರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಳ್ಳಲು ಕಾನೂನು ಹೋರಾಟ ಒಂದೇ ಪರಿಹಾರವಲ್ಲ ಅದಕ್ಕಾಗಿ ಜನರೆಲ್ಲ ಬೀದಿಗಿಳಿದು ಹೊರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಹಿಂದೆ ಮುಲ್ಕಿ ವೇತನ ಪಡೆಯುತ್ತಿದ್ದ ಹೈದ್ರಾಬಾದ್ ಪ್ರಾಂತ್ಯದ ನೌಕರರಿಗೂ ಹಳೆಮೈಸೂರು ಭಾಗದ ನೌಕರರ ವೇತನಕ್ಕೆ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಈ ವ್ಯತ್ಯಾಸವನ್ನು ಸರಿದೂಗಿಸಲಾಯಿತು. ಆದರೆ ಆಗ ಎಲ್ಲ ನೌಕರರು ನಿವೃತ್ತಿ ಹೊಂದಿದ್ದು ವಿಪರ್ಯಾಸ ಎಂದು ಅವರು ಅಭಿಪ್ರಾಯಪಟ್ಟರು.

ಶರಣರು ಕನ್ನಡ ಭಾಷೆಯನ್ನು ಬೆಳೆಸಿದ್ದರಿಂದ ವಚನ ಸಾಹಿತ್ಯ ಪ್ರಬಲವಾಯಿತು. ಅಲ್ಲಮಪ್ರಭುವಿನ ವಚನಗಳು ಗ್ರೀಕ್‌ನಲ್ಲಿ ಚರ್ಚೆಗೊಳಗಾಗುತ್ತಿದ್ದವು ಎಂದರೆ ಭಾಷೆಯ ಶ್ರೀಮಂತಿಕೆ ಎಂತಹದ್ದು ಎಂಬುದರ ಅರಿವಾಗುತ್ತದೆ ಎಂದರು. ಡಾ.ಶಾಹಮೀದ ದೋಟಿಹಾಳ ಕಾರ್ಯಕ್ರಮ ನಿರೂಪಿಸಿದರು. ನಟರಾಜ ಸೊನಾರ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.