ADVERTISEMENT

ವೆಂಕಟಗಿರಿ: ಇಟ್ಟಂಗಿ ಬಟ್ಟಿ ಕಾರ್ಮಿಕರ ಆಕ್ರೋಶ.ಜೂಜಾಟಕ್ಕೆ ಲಗಾಮು ಹಾಕುವವರೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 10:30 IST
Last Updated 14 ಫೆಬ್ರುವರಿ 2011, 10:30 IST

ಗಂಗಾವತಿ: ತಾಲ್ಲೂಕಿನ ಐತಿಹಾಸಿಕ ವೆಂಕಟಗಿರಿ ಗ್ರಾಮದ ಗಾಳೆಮ್ಮ ದೇವಸ್ಥಾನದ ಹತ್ತಿರದ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ತೋಟದಲ್ಲಿ ಕಳೆದ ಎರಡು ತಿಂಗಳಿಂದ ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟ ಜೋರಾಗಿ ಸಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗಂಗಾವತಿ ನಗರದ ನಾಲ್ಕಾರು ಜನ ಪ್ರಭಾವಿ ವ್ಯಕ್ತಿಗಳ ಪಾಲುದಾರಿಕೆಯಲ್ಲಿ ಜೂಜಾಟದ ಅಡ್ಡೆ ನಡೆಯುತ್ತಿದ್ದು, ನಿತ್ಯ ಸುಮಾರು ಎರಡರಿಂದ ಮೂರು ಲಕ್ಷ ರೂಪಾಯಿ ಮೊತ್ತದಷ್ಟು ಜೂಜಾಟ ನಡೆಯುತ್ತಿದೆ ಎನ್ನಲಾಗಿದೆ.

ಹೊಸಪೇಟೆ, ಚಳ್ಳಿಕೇರಿ, ಬಳ್ಳಾರಿಯ ಮೈನ್ಸ್ ಪ್ರಮುಖರು, ಕಂಪ್ಲಿ, ಕೊಪ್ಪಳ ಸೇರಿದಂತೆ ವಿವಿಧ ಭಾಗದಿಂದ ಜೂಜುಕೋರರು ಲಕ್ಷಾಂತರ ರೂಪಾಯಿ ಮೊತ್ತದೊಂದಿಗೆ ಬಂದು ಜೂಜಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.ವಿಐಪಿ ಮತ್ತು ಸಾಮಾನ್ಯ ಜೂಜುಕೋರರಿಗೆ ಪ್ರತ್ಯೇಕ ದರ್ಜೆಯ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯ ದ್ವಿಚಕ್ರ ಸೇರಿದಂತೆ 200ರಿಂದ 300 ವಾಹನಗಳಲ್ಲಿ ಬರುವ ಜೂಜುಕೋರರು ಜೂಜಾಟದಲ್ಲಿ ತೊಡಗುತ್ತಾರೆ. ಗ್ರಾಮದಲ್ಲಿ ನಿತ್ಯ ಜಾತ್ರೆಯಂತೆ ಭಾಸವಾಗುತ್ತಿದೆ ಎಂದು ತಿಮ್ಮಣ್ಣ ದೂರಿದ್ದಾರೆ. ವೆಂಕಟಗಿರಿ ಸುತ್ತಲಿನ ಗ್ರಾಮಗಳಲ್ಲಿ ಸುಮರು 80ಕ್ಕೂ ಹೆಚ್ಚು ಇಟ್ಟಂಗಿ ಭಟ್ಟಿಗಳಿದ್ದು ಅಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಈ ಜೂಜಿನ ಅಡ್ಡೆಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಜೂಜಾಟ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ಮಾಡಿದರೆ ಹಣ ಕಳೆದುಕೊಂಡವರಿಗೆ ಮರಳಿ ಹಣ ನೀಡುವುದಾಗಿ ಅಡ್ಡೆಯ ವ್ಯವಸ್ಥಾಪಕರು ಭರವಸೆ ನೀಡಿರುವ ಹಿನ್ನೆಲೆ ಜೂಜುಕೋರರು ಯಾವ ಅಧಿಕಾರಿಗಳ ಭಯವಿಲ್ಲದೆ ಜೂಜಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.ಈ ಹಿಂದೆ ಸಾರಾಯಿ ಬೇಡ ಎಂದು ಠಾಣೆವರೆಗೂ ಬಂದ ಹೋರಾಟ ಮಾಡಿದ ಸಾಕಷ್ಟು ಸ್ವಸಹಾಯ ಮಹಿಳಾ ಸಂಘಗಳು, ಅನ್ಯಾಯದ ವಿರುದ್ಧ ಹೋರಾಡುವುದಾಗಿ ಕಂಡಲ್ಲಿ ಹೇಳಿಕೊಳ್ಳುವ ಸಂಘಟನೆಗಳ ಮುಖಂಡರು ಮಾತ್ರ ಇತ್ತ ಗಮನಿಸಿಲ್ಲ ಎಂಬ ಆರೋಪ ಜನರಿಂದ ವ್ಯಕ್ತವಾಗಿದೆ.ತಾಲ್ಲೂಕಿನಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ವೆಂಕಟಗಿರಿ, ಶ್ರೀರಾಮನಗರ, ಸಿದ್ದಾಪುರ, ಡಂಕನಕಲ್, ಕಡೆ ಸಾಕಷ್ಟು ಜೂಜಾಟದ ಕೇಂದ್ರ ತಲೆ ಎತ್ತಿದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಿಪಿಐಎಂಎಲ್ ಮುಖಂಡರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.