ADVERTISEMENT

`ಶಾಂತಿ ಸಂದೇಶ ಸಾರಿದ ಯೇಸು'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 8:17 IST
Last Updated 24 ಡಿಸೆಂಬರ್ 2012, 8:17 IST

ಯಲಬುರ್ಗಾ: ಪ್ರತಿಯೊಬ್ಬರನ್ನು ಪ್ರೀತಿ, ಮಮಕಾರದಿಂದ ಸ್ವೀಕರಿಸುವ ಯೇಸು, ಈ ನಾಡಿಗೆ ಶಾಂತಿ ಸಂದೇಶ ಸಾರಿದ ಮಹಾಪ್ರಭು ಎಂದು ಸ್ಥಳೀಯ ಗುಡ್ ಶಫರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವ್ಯವಸ್ಥಾಪಕ ಜೆ. ರಾಜಕುಮಾರ ಹೇಳಿದರು.

ಕ್ರಿಸ್‌ಮಸ್ ಆಚರಣೆ ಪ್ರಯುಕ್ತ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಕರುಣಾಮಯಿ ಎಂದೇ ಗುರುತಿಸಲ್ಪಟ್ಟಿರುವ ಯೇಸು ಪ್ರಭುವಿನ ಅಂತರಾತ್ಮವನ್ನು ಮಕ್ಕಳಲ್ಲಿ ಕಂಡು ಕೊಳ್ಳಬಹುದಾಗಿದೆ, ಮಕ್ಕಳ ಸಾಂಸ್ಕೃತಿಕ ಕಲರವದಲ್ಲಿಯೇ ಕ್ರಿಸ್‌ಮಸ್ ಆಚರಣೆಗೆ ಮುಂದಾಗಿದ್ದು ಸಂತೋಷದ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

12ನೇ ವರ್ಷ ಪ್ರಾಯದಲ್ಲಿರುವ ಸದ್ರಿ ಶಿಕ್ಷಣ ಸಂಸ್ಥೆಯು ಹಲವು ಕಷ್ಟನಷ್ಟಗಳನ್ನು ಅನುಭವಿಸಿಯೇ ಈಗ ಸಮೃದ್ಧಿಯಾಗಿ ಬೆಳೆದು ನಿಂತಿದೆ. ವಿಶಾಲವಾದ ಮೈದಾನ, ಪ್ರಶಾಂತ ವಾತಾವರಣ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವ ಶಾಲೆಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಪಾಲಕರ ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದ್ದು, ಮುಂದೆಯೂ ಅದೇ ಪ್ರೋತ್ಸಾಹ ದೊರೆಯುವ ಆಶಾಭಾವನೆ ಹೊಂದಿದ್ದೇವೆ ಎಂದು ನುಡಿದರು.

ಶಾಲೆಯ  ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.
ಎಸ್‌ಡಿಎಂಸಿ ಅಧ್ಯಕ್ಷ ಶಿವನಗೌಡ ಬನಪ್ಪಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ, ಪರ್ತಕರ್ತ ಶಿವಪುತ್ರಯ್ಯ ಹಿತ್ತಲಮನಿ, ವಿ.ಎಸ್. ಶಿವಪ್ಪಯ್ಯನಮಠ, ಮುಖ್ಯೋಪಾಧ್ಯಾಯಿನಿ ಜೆ.ರಾಜಮಣಿ ಸೇರಿದಂತೆ ಅನೇಕ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕ ಶರಣಪ್ಪ ಸ್ವಾಗತಿಸಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.