ADVERTISEMENT

ಶಾಸಕ ತಂಗಡಗಿ ವಿರುದ್ಧ ಪಾದಯಾತ್ರೆ

ಕೃಷ್ಣಾ ಬಿ ಸ್ಕೀಂ ಯೋಜನೆಯಲ್ಲಿ ರೈತರಿಗೆ ಅನ್ಯಾಯ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:12 IST
Last Updated 1 ಮಾರ್ಚ್ 2018, 11:12 IST
ಕನಕಗಿರಿ ಮಂಡಲ ಬಿಜೆಪಿ ವತಿಯಿಂದ ಶಾಸಕ ಶಿವರಾಜ ತಂಗಡಗಿ ಅವರ ದುರಾಡಳಿತ ವಿರೋಧಿಸಿ ಬುಧವಾರ ನವಲಿಯಿಂದ ಕನಕಗಿರಿವರೆಗೆ ಪಾದಯಾತ್ರೆ ನಡೆಯಿತು
ಕನಕಗಿರಿ ಮಂಡಲ ಬಿಜೆಪಿ ವತಿಯಿಂದ ಶಾಸಕ ಶಿವರಾಜ ತಂಗಡಗಿ ಅವರ ದುರಾಡಳಿತ ವಿರೋಧಿಸಿ ಬುಧವಾರ ನವಲಿಯಿಂದ ಕನಕಗಿರಿವರೆಗೆ ಪಾದಯಾತ್ರೆ ನಡೆಯಿತು   

ಕನಕಗಿರಿ: ಶಾಸಕ ಶಿವರಾಜ ತಂಗಡಗಿ ಅವರ ದುರಾಡಳಿತ ವಿರೋಧಿಸಿ ಕನಕಗಿರಿ ಮಂಡಲ ಬಿಜೆಪಿ ವತಿಯಿಂದ ಬುಧವಾರ ನವಲಿಯಿಂದ ಕನಕಗಿರಿ ವರೆಗೆ ಪಾದಯಾತ್ರೆ ನಡೆಯಿತು.

ಸಮೀಪದ ನವಲಿ ಗ್ರಾಮದ ಬುದ್ಧ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಪಾದಯಾತ್ರೆಗೆ ಚಾಲನೆ ನೀಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಸವರಾಜ ಧಡೇಸೂಗರು ಮಾತನಾಡಿ, ‘ಅಧಿಕಾರ ದುರುಪಯೋಗ ಪಡಿಸಿ ಕೊಳ್ಳುವ ಮೂಲಕ ಶಾಸಕ ಶಿವರಾಜ ತಂಗಡಗಿ ಅವರು ದಬ್ಬಾಳಿಕೆ, ದೌರ್ಜನ್ಯ ನಡೆಸಿದ್ದಾರೆ. ಬಿಜೆಪಿ ಕಾರ್ಯ ಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದ್ದಾರೆ’ ಎಂದು ದೂರಿದರು.

‘ಕೃಷ್ಣಾ ಬಿ ಸ್ಕೀಂ ಯೋಜನೆಯ ವ್ಯಾಪ್ತಿಯಲ್ಲಿ ಈ ವಿಧಾನಸಭಾ ಕ್ಷೇತ್ರದ ಒಟ್ಟು 24 ಗ್ರಾಮಗಳನ್ನು ಸೇರಿಸಲಾಗಿತ್ತು. ಆದರೆ, ಈಗ ಬರೀ 9 ಗ್ರಾಮಗಳನ್ನು ಸೇರ್ಪಡೆ ಮಾಡುವ ಮೂಲಕ 15 ಗ್ರಾಮಗಳಿಗೆ ಅನ್ಯಾಯ ಮಾಡಲಾಗಿದೆ. ಕೈ ಬಿಟ್ಟಿರುವ ಗ್ರಾಮಗಳ ಜತೆಗೆ ನವಲಿ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಯೋಜನೆಯಲ್ಲಿ ಸೇರಿಸಬೇಕು. ತಾಲ್ಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 15 ಗಂಟೆ ವಿದ್ಯುತ್ ಪೊರೈಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಜೀವಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕೋಟಿಗಟ್ಟಲೆ ಅನುದಾನ ವೆಚ್ಚ ಮಾಡಿದರೂ ನೀರನ್ನು ಸಮರ್ಪಕವಾಗಿ ಪೊರೈಸುತ್ತಿಲ್ಲ. ಜನ ನೀರಿಗಾಗಿ ಪರದಾಡುತ್ತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ ಬಜಾರದ ಮಾತನಾಡಿ, ‘ಶಾಸಕ ತಂಗಡಗಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಆಯ್ಕೆ ಮಾಡಿದ ಜನತೆಯನ್ನು ಸೌಜನ್ಯಕ್ಕೂ ಭೇಟಿ ಮಾಡಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೋಟಿಗಟ್ಟಲೆ ಅನುದಾನ ಲೂಟಿ ಮಾಡಿದ್ದಾರೆ’ ಎಂದು ದೂರಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶಿವಶರಣೆಗೌಡ, ಎಸ್‌.ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನಾಗರಾಜ ಬಿಲ್ಗಾರ, ಮುಖಂಡರಾದ ಡಾ.ಅರವಟಗಿಮಠ, ಗುರುಸಿದ್ದಪ್ಪ ಯರಕಲ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಪ್ಪ ಹೂಗಾರ, ಪರಶುರಾಮ, ಎಪಿಎಂಸಿ ನಿರ್ದೇಶಕರಾದ ದೇವಪ್ಪ ತೋಳದ, ದುರ್ಗಾರಾವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಮಸಾಲಿ, ಡಾ.ದೇವರಾಜ ಮಂಗಳೂರು, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ವಿರುಪಣ್ಣ ಕಲ್ಲೂರು, ಎಸ್‌ಟಿ ಮೋರ್ಚಾ ಅಧ್ಯಕ್ಷ ಗ್ಯಾನಪ್ಪ ಗಾಣದಾಳ, ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸಣ್ಣ ಕನಕಪ್ಪ, ನಗರ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಶಕ್ತಿ ಕೇಂದ್ರದ ಅಧ್ಯಕ್ಷರಾದ ವಾಗೀಶ ಹಿರೇಮಠ, ಶರತ್ ನಾಯಕ, ಕನಕಗಿರಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ, ಮಾಜಿ ಅಧ್ಯಕ್ಷೆ ಮಲ್ಲಮ್ಮ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ದೇಸಾಯಿ, ಪ್ರಮುಖರಾದ ಕೆ. ಎನ್‌. ಪಾಟೀಲ, ಮೋಹನರಾವ್, ಸಿದ್ದರಾಮಗೌಡ ಉಪ್ಪಳ, ತಿಮ್ಮಾರಡ್ಡಿ ಗಿಲ್ಲೆಸೂಗರು, ಜೀಲನಸಾಬ, ಅಮರಪ್ಪ ಗದ್ದಿ, ಪಿ. ಡಿ. ನಾಯಕ್, ಹನುಮೇಶ ವಾಲೇಕಾರ ಇದ್ದರು.

ನವಲಿಯಿಂದ ಆರಂಭವಾದ ಪಾದಯಾತ್ರೆ ಕರಡೋಣ, ಮಲ್ಲಾಪುರ, ಗುಡದೂರ, ಹಿರೇಖೇಡ, ಗೋಡಿನಾಳ, ಶಿರಿವಾರ, ಕನಕಾಪುರ ಕ್ರಾಸ್‌ ಮೂಲಕ ಕನಕಗಿರಿ ತಲುಪಿತು. ಕರಡೋಣದಲ್ಲಿ ಉಪಾಹಾರ, ಹಿರೇಖೇಡ ಗ್ರಾಮದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕರ್ತರಿಗೆ ಕುಡಿಯುವ ನೀರಿನ ಪಾಕೆಟ್‌ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.