ಗಂಗಾವತಿ: ತಾಲ್ಲೂಕಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಅಧಿಕ ಶುಲ್ಕ, ವಂತಿಕೆ ಸಂಗ್ರಹಿಸಿವೆ ಎಂಬ ಆರೋಪದ ಹಿನ್ನೆಲೆ ಅಂತಹ ಶಾಲೆಗಳ ವಿರುದ್ಧ ದೂರು ಸಲ್ಲಿಸಲು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಲಕರ ಅನುಕೂಲಕ್ಕೆ ಶಿಕ್ಷಣ ಇಲಾಖೆ `ಸಹಾಯವಾಣಿ'ಯನ್ನು ಆರಂಭಿಸಿದೆ.
`ಬಟ್ಟೆ, ಪುಸ್ತಕ, ಸ್ಟೇಷನರಿ ಸಾಮಾಗ್ರಿ ವಿತರಣೆ, ಬೆಲ್ಟ್, ಟೈ ಮೊದಲಾದವುಗಳ ನೆಪದಲ್ಲಿ ಖಾಸಗಿ ಶಾಲೆಗಳು ಪಾಲಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳ ಹಿನ್ನೆಲೆ ಸಹಾಯವಾಣಿ ಆರಂಭಿಸಲಾಗುತ್ತಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ದೂರುಗಳನ್ನು ಸಹಾಯವಾಣಿ: 8277134589ಗೆ ಕರೆ ಮಾಡಬಹುದು. ಇಲ್ಲವೆ ಸಮನ್ವಯಾಧಿಕಾರಿ ಎಂ.ಎಸ್.ಪಾಟೀಲ್ ಅವರಿಗೆ ಖುದ್ದಾಗಿ ಸಲ್ಲಿಸಬಹುದು. ಪಾಲಕರು ಇಚ್ಛಿಸಿದರೆ ಅವರ ಹೆಸರು, ಮಾಹಿತಿ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
`ಪಾಲಕರು ನೀಡುವ ಮಾಹಿತಿ, ದೂರು ಆಧಾರಿಸಿ ಇಲಾಖೆಯಿಂದ ರಚಿಸಲಾದ ಸಮಿತಿಯಿಂದ ತನಿಖೆ ಕೈಗೊಳ್ಳಲಾಗುವುದು. ತನಿಖೆ ವೇಳೆ ಪಾಲಕರ ಆರೋಪ ನಿಜ ಎಂದು ಸಾಬೀತಾದಲ್ಲಿ ಅಂತಹ ಶಾಲೆಯ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು' ಎಂದು ಬಿಇಒ ತಿಳಿಸಿದ್ದಾರೆ.
ಶುಲ್ಕ ಎಷ್ಟು?: ಖಾಸಗಿ ಶಾಲೆಗಳಲ್ಲಿನ ಭೌತಿಕ ಹಾಗೂ ಮೂಲ ಸೌಲಭ್ಯ, ಅವುಗಳಿಗೆ ಆಡಳಿತ ಮಂಡಳಿ ಮಾಡಿದ ಖರ್ಚು-ವೆಚ್ಚಗಳನ್ನು ಆಧಾರಿಸಿ ಸರ್ಕಾರವು ಪ್ರವೇಶ ಪಡೆಯುವ ಪ್ರತಿ ತರಗತಿಯ ಮಕ್ಕಳಿಗೆ ಇಂತಿಷ್ಟು ಎಂದು ಶುಲ್ಕ ನಿಗದಿ ಮಾಡಿದೆ.
ಶಾಲೆಗೆ ಪ್ರವೇಶ ಪಡೆಯುವ ಮಕ್ಕಳಿಂದ ಸಂಗ್ರಹಿಸುವ ಶುಲ್ಕದ ಶೇ 70ರಷ್ಟು ಭಾಗವನ್ನು ಶಿಕ್ಷಕರಿಗೆ ವೇತನ ರೂಪದಲ್ಲಿ ಅದೂ ಬ್ಯಾಂಕುಗಳಲ್ಲಿರುವ ಉಳಿತಾಯ ಖಾತೆಯ ರೂಪದಲ್ಲಿ ನೀಡಬೇಕು ಎಂದು ಸರ್ಕಾರ ನಿಯಮಾವಳಿ ರೂಪಿಸಿದೆ.
`ಕಾನೂನು ಪಾಲಿಸದ ಖಾಸಗಿ ಶಾಲೆಗಳು ಹಣ ಸುಲಿಯುತ್ತಿವೆ. ಉಚಿತ ಶಿಕ್ಷಣ ಕಾಯ್ದೆಯಲ್ಲಿ (ಆರ್‌ಟಿಐ) ದಾಖಲಾದ ಮಕ್ಕಳ ಪಠ್ಯ-ಪುಸ್ತಕ, ಸಮವಸ್ತ್ರ ಇತ್ಯಾದಿಗಳ ವೆಚ್ಚವೇ ವಾರ್ಷಿಕ ರೂ18 ರಿಂದ 24 ಸಾವಿರ ಮೀರುತ್ತಿದೆ' ಎಂದು ಪಾಲಕರಾದ ನಟರಾಜ, ಶಿವನಗೌಡ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.