ADVERTISEMENT

ಸಂಘಟನೆಗಳ ಜೈಲ್‌ಭರೋ ಚಳವಳಿ

ಕುಷ್ಟಗಿ: ರಸ್ತೆತಡೆ -39 ಪ್ರತಿಭಟನಾಕಾರರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:50 IST
Last Updated 20 ಡಿಸೆಂಬರ್ 2012, 8:50 IST

ಕುಷ್ಟಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಬುಧವಾರ ಇಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜೈಲಭರೋ ಚಳವಳಿ ನಡೆಸಿದರು.

ಪ್ರತಿಭಟನೆ ಅಂಗವಾಗಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ರಾಷ್ಟ್ರೀಯ ಹೆದ್ದಾರಿ ಬಳಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ವಾಹನಸಂಚಾರಕ್ಕೆ ಅಡ್ಡಿಪಡಿಸಿದ 39 ಕಾರ್ಯಕರ್ತರನ್ನು ಬಂಧಿಸಿ ಠಾಣೆಗೆ ಕರೆದೊಯ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಹಾದೇವ ಪಂಚಮುಖಿ ಮತ್ತು ಸಿಬ್ಬಂದಿ ನಂತರ ಬಿಡುಗಡೆ ಮಾಡಿದರು. ಬಂಧಿತರಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ರೈತ ಸಂಘ, ಬಿಸಿಯೂಟ ನೌಕರರ ಸಂಘ ಇತರೆ ಸಂಘಟನೆಗಳ ಕಾರ್ಯಕರ್ತರು ಸೇರಿದ್ದರು.

ದುಡಿಯವ ವರ್ಗ, ಸಾಮಾನ್ಯರನ್ನು ಸಂಕಷ್ಟಕ್ಕೀಡುಮಾಡಿರುವ ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವುದು, ಅಸಂಘಟಿತ ಕಾರ್ಮಿಕರ ಸಾಮಾಜಿ ಭದ್ರತೆಯನ್ನು ಸಾರ್ವತ್ರಿಕಗೊಳಿಸುವುದು. ಕನಿಷ್ಟ ವೇತನವನ್ನು ಖಾತರಿಗೊಳಿಸುವುದು, ಉದ್ಯೋಗ ಸೃಷ್ಟಿಸಲು ಪ್ಯಾಕೇಜ್ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಪ್ರಮುಖರಾದ ಎಂ.ಕಲಾವತಿ, ಜಿ.ನಾಗರಾಜ, ಗವಿಸಿದ್ದಪ್ಪ ಬಿಜಕಲ್, ದೊಡ್ಡನಗೌಡ ಬಿಜಕಲ್, ದುರುಗಪ್ಪ ಗಂಗನಾಳ, ಅಕ್ಕಮಹಾದೇವಿ ಪಟ್ಟಲಚಿಂತಿ, ಉಮಾ ಚಿಕ್ಕಗೊಣ್ಣಾಗರ, ಶಾಂತಮ್ಮ ಬಡಿಗೇರ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.      ರಸ್ತೆ ತಡೆ ನಡೆಸಿದ್ದರಿಂದ ಕೆಲ ಹೊತ್ತು ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.