ADVERTISEMENT

ಸಂತ ಸೇವಾಲಾಲ್ 273ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:10 IST
Last Updated 20 ಫೆಬ್ರುವರಿ 2012, 6:10 IST

ಕುಕನೂರು: ಯಾವುದೇ ಒಂದು ಹಿಂದುಳಿದ ಸಮಾಜದ ಏಳ್ಗೆ ಸಾಧಿಸಬೇಕಾದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.
ಇಲ್ಲಿಯ ಬಂಜಾರ ಸಮಾಜ ಬಾಂಧವರಿಂದ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 273ನೇ ಜಯಂತ್ಯುತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳ ಮೂಲಕ ಸರ್ಕಾರ ಹಲವಾರು ಸೌಲಭ್ಯ ನೀಡುತ್ತಿದೆ. ಅವುಗಳನ್ನು ಸದುಪಯೋಗ ಪಡಿಸುವುದರೊಂದಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಪ್ರದಾಯವನ್ನು ಕೊಡಲು ಪಾಲಕರು ಸಂಕಲ್ಪ ತೊಡಬೇಕೆಂದು ಅವರು ಕರೆ ನೀಡಿದರು.

ಸಮಾರಂಭ ಉದ್ಘಾಟಿಸಿ ಬಿ.ಜೆ.ಪಿ ಯುವ ಮುಖಂಡ ನವೀನ್ ಗುಳಗಣ್ಣವರ ಮಾತನಾಡಿ, ಬಂಜಾರ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿದೆ. ಯಲಬುರ್ಗಾ ತಾಲ್ಲೂಕಿನಲ್ಲಿರುವ 22 ಲಂಬಾಣಿ ತಾಂಡಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ, ರಸ್ತೆ, ಕುಡಿಯುವ ನೀರು, ಶಾಲೆ, ಸಮುದಾಯ ಭವನ ಸೇರಿದಂತೆ ಮತ್ತಿತರೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸರ್ಕಾರಿ ಅಭಿಯೋಜಕ ಎನ್.ಎಸ್.ನಾಯಕ, ನ್ಯಾಯವಾದಿ ಎಸ್.ಎಸ್.ಮಾದಿನೂರ, ತಾಲ್ಲೂಕು ಪಂಚಾಯತಿ ಸದಸ್ಯ ಶೇಖರಪ್ಪ ವಾರದ, ಬಿ.ಜೆ.ಪಿ ಮುಖಂಡ ದ್ಯಾಮಣ್ಣ ಜಮಖಂಡಿ, ಸಮಾಜದ ಮುಖಂಡ ಭರತ್ ನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಇತರರು ಮಾತನಾಡಿದರು.

ಯಲಬುರ್ಗಾ ಶ್ರೀಧರ ಮುರಡಿ ಮಠ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಸಮಾಜದ ಧರ್ಮ ಗುರು ಗೋಷಾವಿಬಾಬಾ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಿಪ್ಪಣ್ಣ ದೇವಸಿಂಗ್ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಎ.ಪಿ.ಎಂ.ಸಿ ಸದಸ್ಯ ದಾವಲಸಾಬ ಕುದರಿ, ಅಂದಪ್ಪ ಮುಂಡರಗಿ, ಉಪನ್ಯಾಸಕ ಆರ್.ಪಿ.ರಾಜೂರ, ಮಹ್ಮದ ಇಸಾಕ್ ದೇವದುರ್ಗ, ಬಿ.ಎಸ್.ನವಲೆ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಮುಖಂಡ ಭರತ್ ನಾಯಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಹೋಬಣ್ಣ ಕೆ.ಎಲ್.ಸ್ವಾಗತಿಸಿದರು. ಎಸ್.ಎಲ್.ಲಮಾಣಿ ಪ್ರಾಸ್ತಾವಿಕ ಮಾತನಾಡಿದರು. ಎ.ಪಿ.ಮುಧೋಳ ನಿರೂಪಿಸಿದರು. ಲಕ್ಕಪ್ಪ ಶ್ಯಾಸಿ ವಂದಿಸಿದರು. ದೇವೇಂದ್ರಪ್ಪ ರಾಠೋಡ, ಆರ್.ಡಿ.ರಾಠೋಡ, ಮೇಘರಾಜ ಬಳಗೇರಿ, ರವಿಕುಮಾರ ನಾಯಕ, ನಾರಾಯಣಪ್ಪ ನಾಯಕ, ಲೋಕನಾಥ ನಾಯಕ, ಲಾಲ್‌ಸಿಂಗ ನಾಯಕ, ಶೇಖರಪ್ಪ ಲಮಾಣಿ, ರತ್ನಪ್ಪ ನಾಯಕ, ರೇವಪ್ಪ ಕಟ್ಟಿಮನಿ, ನಾಗರಾಜ ಭಗತ್ ಇತರರು ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.