ಯಲಬುರ್ಗಾ: ಒಂದು ವರ್ಷದಿಂದ ಪಾವತಿಸದೇ ಉಳಿದಿರುವ ವೇತನ ನೀಡುವುದು, ಗ್ರಾಪಂ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಗ್ರಾ.ಪಂ. ನೌಕರರ ಸಂಘದ ಪದಾಧಿಕಾರಿಗಳು ಧರಣಿ ನಡೆಸಿದರು.
ಸ್ಥಳೀಯ ಮೊಗ್ಗಿಬಸವೇಶ್ವರ ದೇವಸ್ಥಾನದಿಂದ ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಗ್ರಾಪಂ ಸಿಬ್ಬಂದಿ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅತ್ಯಂತ ಕಡಿಮೆ ಸಂಬಳದಲ್ಲಿ ಜೀವನ ಸಾಗಿಸುತ್ತಿರುವ ಪಂಚಾಯಿತಿ ನೌಕರರಿಗೆ ಇತ್ತೀಚಿನ ವರ್ಷದಲ್ಲಿ ವೇತನವನ್ನೂ ಸರಿಯಾಗಿ ಪಾವತಿಸುತ್ತಿಲ್ಲ, ಇದರಿಂದ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಕರ ವಸೂಲಿಯಲ್ಲಿನ ಶೇ 40ರಷ್ಟು ಹಣವನ್ನು ವೇತನಕ್ಕೆ ಬಳಸುವಂತೆ ಆದೇಶವಿದ್ದರೂ ಪರಿಪಾಲನೆ ಮಾಡದೇ ನಿರ್ಲಕ್ಷ್ಯಿಸಿದ್ದಾರೆ. ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಸಾರ್ವಜನಿಕರ ಸೇವೆ ಮಾಡುತ್ತಿರುವ ಪಂಚಾಯಿತಿ ಸಿಬ್ಬಂದಿ ಹಿತ ಕಾಪಾಡಲು ಸರ್ಕಾರ ಆಸಕ್ತಿ ತೋರಬೇಕು ಎಂದು ಸಂಘದ ಅಧ್ಯಕ್ಷ ಶಿವಶಂಕರ ಬೀಳಗಿ ಆಗ್ರಹಿಸಿದರು.
ಪ್ರತಿ ತಿಂಗಳ 5ನೇ ದಿನಾಂಕಿನೊಳಗಾಗಿ ವೇತನ ಪಾವತಿ ಮಾಡಬೇಕು. ಸಿಬ್ಬಂದಿಗಾಗಿ ಬಂದ ಹಣವನ್ನು ಅವರ ವೇತನ ಖಾತೆಗೆ ಜಮಾ ಮಾಡಬೇಕು. ರಾಜ್ಯ ಸರ್ಕಾರ ಹೊರಡಿಸಿದ ಆದೇಶದಂತೆ ಕನಿಷ್ಠ ವೇತನ ನೀಡಬೇಕು. ಗ್ರಾಪಂ ಸಿಬ್ಬಂದಿಗೆ ಪ್ರತಿವರ್ಷ ಸಮವಸ್ತ್ರ ಪೂರೈಸಬೇಕು. ಇತರೆ ನೌಕರರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಪಂಚಾಯಿತಿ ನೌಕರರಿಗೂ ನೀಡಬೇಕು ಎಂದು ಒತ್ತಾಯಿಸಲಾಯಿತು.
ಜನಶ್ರೀ ಹಾಗೂ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿದ ಪಂಚಾಯಿತಿ ನೌಕರರಿಗೆ ಬಡ್ತಿ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಪದಾಧಿಕಾರಿಗಳು ಮನವಿ ಮಾಡಿದರು.
ಸಂಘದ ಮುಖಂಡರಾದ ಶರಣಪ್ಪ ಮಡಿವಾಳರ, ರಾಘವೇಂದ್ರ ಕುಲಕರ್ಣಿ, ಎಸ್.ಸಿ. ದ್ಯಾಮನಗೌಡ, ಮಾನಪ್ಪ ಹೂಗಾರ ಇತರರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.