ADVERTISEMENT

ಸಾವಿರ ಕಿ.ಮೀ. ಉರುಳು ಸೇವೆ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:39 IST
Last Updated 12 ಡಿಸೆಂಬರ್ 2013, 8:39 IST

ಕುಷ್ಟಗಿ: ಲೋಕಕಲ್ಯಾಣಾರ್ಥವಾಗಿ ಮಳೆ ಚಳಿಗಾಳಿ ಬಿಸಿಲೆನ್ನದೇ 1200 ಕಿ.ಮೀ. ವರೆಗೆ ಉರುಳು ಸೇವೆ ಕೈಗೊ­ಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿರುವುದು ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಕಂಡುಬಂದಿತು.

ಮೂಲತಃ ಮಹಾರಾಷ್ಟ್ರದ ಅಮ­ರಾ­­ವತಿಯ ಸಾಯಿಬಾಬಾ ಭಕ್ತರಾ­ಗಿರುವ ದೇವಿದಾಸ್‌ ಥೋರಾತ್‌ ಸದ್ಯ ಹೆದ್ದಾರಿ ಮೂಲಕ ಶಿರಡಿಯಿಂದ ಪುಟಪರ್ತಿವರೆ­ಗಿನ ಕೈಗೊಂಡಿ­ರುವ ಉರುಳು ಸೇವೆ ಜನರ ಗಮನಸೆಳೆ­ಯುತ್ತಿದೆ.
ಅ.15ರಂದು ಆರಂಭ­ಗೊಂಡಿ­ರುವ ಉರುಳು ಸೇವೆ ಬುಧವಾರ ಕೊಪ್ಪಳ ಜಿಲ್ಲೆ ಪ್ರವೇಶಿಸಿದ್ದು ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಪುಟಪರ್ತಿವರೆಗೆ ನಡೆಯಲಿದೆ.

ಬೆಳಿಗ್ಗೆ 6 ಗಂಟೆಗೆ ಆರಂಭಗೊಳ್ಳುವ ಉರುಳು ಸೇವೆ ನಿತ್ಯ ಹದಿನೈದು ಕಿ.ಮೀ. ವರೆಗೆ ಸಾಗುತ್ತದೆ. ದಾರಿ­ಹೋಕರು ಹೆಚ್ಚು ಹೊತ್ತು ಮಾತನಾ­ಡಿ­ಸದರೆ ಹತ್ತು ಕಿ.ಮೀ. ನಿಲ್ಲುತ್ತದೆ. ರಾತ್ರಿ ಒಂದು ಊರಿನಲ್ಲಿ ವಾಸ್ತವ್ಯ.

ಲೋಹಾರಿ (ಕುಶಲಕರ್ಮಿ) ಜನಾಂಗದ 40ರ ಹರೆಯದ ದೇವಿದಾಸ ಅವರದು ತುಂಬು ಕುಟುಂಬ. ತಾಯಿ, ಪತ್ನಿ, ಮಕ್ಕಳು, ಸಹೋದರರು ಅಮರಾವತಿಯಲ್ಲಿದ್ದು ಪ್ರತಿ ಎರಡು ವರ್ಷಕ್ಕೆ ಒಮ್ಮೆ ನಡೆಯುವ ಉರುಳು ಸೇವೆಗೆ ಯಾರೂ ಅಡ್ಡಿಬಂದಿಲ್ಲ. ಊಟ, ಬಟ್ಟೆಯ ವೆಚ್ಚವನ್ನು ಸಾಯಿ ಟ್ರಸ್ಟ್‌ ನೋಡಿಕೊಳ್ಳುತ್ತದೆ.

ಇಂಥ ಕಠಿಣ ಸೇವೆ ಏಕೆ? ಎಂದು ಕೇಳಿದರೆ, ದೇಶ, ನನ್ನಂತೆ ಎಲ್ಲ ಜನತೆ ಸುಖವಾಗಿರಬೇಕು ಎಂಬುದೇ ತಾವು ದೇವರಲ್ಲಿ ಪ್ರಾರ್ಥಿಸುವುದಾಗಿ ದೇವಿದಾಸ ವಿನಮ್ರವಾಗಿ ಹೇಳುತ್ತಾರೆ.

ಉರುಳು ಸೇವೆ ಕೇವಲ ಇಷ್ಟೇ ಅಲ್ಲ ಈಗಾಗಲೇ ಐದು ಬಾರಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ವೈಷ್ಣವೋ­ದೇವಿ ಮಂದಿರದವರೆಗಿನ ಸುಮಾರು 3000 ಕಿ.ಮೀ.ವರೆಗೂ ಅದು ಮೂರು ಬಾರಿ, ಪುಟಪರ್ತಿಗೆ ಎರಡು ಬಾರಿ ಇದೇ ರೀತಿ ಉರುಳು ಸೇವೆ ನಡೆಸಿರುವುದಾಗಿ ಹೇಳಿದರು.

ಸದ್ಯ ನಡೆಯುತ್ತಿರುವುದು 6ನೇ ಉರುಳು ಸೇವೆಯಾಗಿದ್ದು, ಮುಂದಿನ ವರ್ಷ ಮುಂಬೈನಿಂದ ಶಿರಡಿವರೆಗೆ 7ನೇ ಪಾದಯಾತ್ರೆ ನಡೆಸಿ ಅಂತ್ಯಗೊಳಿ­ಸುವ ಸಂಕಲ್ಪ ಮಾಡಿರುವುದಾಗಿ ದೇವಿದಾಸ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.