ADVERTISEMENT

ಸ್ವಾತಂತ್ರ್ಯ ಯೋಧರ ಗೌರವಿಸಿದರೆ ಅರ್ಥ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 8:20 IST
Last Updated 16 ಆಗಸ್ಟ್ 2012, 8:20 IST

ಯಲಬುರ್ಗಾ: ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯೋಧರ ಸ್ಮರಣೆ ಹಾಗೂ ಅವರಿಗೆ ಗೌರವಿಸುವ ಮೂಲಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ ಭಾರತ ಕೆಲವೊಂದರಲ್ಲಿ ವಿಶ್ವಕ್ಕೆ ಮಾದರಿಯಾಗುವಮಟ್ಟಿಗೆ ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ತಹಸೀಲ್ದಾರ ಈ.ಡಿ. ಭೃಂಗಿ ಹೇಳಿದರು.

ಸ್ಥಳೀಯ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ತಮ್ಮ ಸಂದೇಶ ಭಾಷಣದಲ್ಲಿ ಮಾತನಾಡಿದ ಅವರು, ಅನೇಕ ರೀತಿಯ ತೊಂದರೆಗಳು ಆಪತ್ತುಗಳು ದೇಶದ ಭದ್ರತೆಗೆ ಧಕ್ಕೆತರುತ್ತಿದ್ದು, ಅವುಗಳನ್ನು ಮೆಟ್ಟಿ ನಿಲ್ಲುವ ಪಡೆ ಸೃಷ್ಟಿಯಾಗಬೇಕಾಗಿದೆ ಎಂದರು. 

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಶಿವನಗೌಡ ಮಾತನಾಡಿ, ನಾಡಿನ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿದೆ ಎಂಬ ಯಕ್ಷ ಪ್ರಶ್ನೆ ಮೂಡುವಂತೆ ಮಾಡಿದೆ.
 
ಭ್ರಷ್ಟಾಚಾರ, ಅಧಕ್ಷತೆ, ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ಪ್ರಕೃತಿಯಲ್ಲಿನ ಬದಲಾವಣೆ ಹೀಗೆ ಅನೇಕ ಆಪತ್ತುಗಳು ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಅನೇಕ ಕಾರಣಗಳಿಂದ ದೇಶದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿರುವ ಕಾರಣ ಬಡವರು ಬಡವರಾಗಿಯೇ ಹಾಗೂ ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ ಎಂದು ನುಡಿದರು.

ಬಿಜೆಪಿ ಮುಖಂಡ ನವೀನ ಗುಳಗಣ್ಣವರ್ ಮಾತನಾಡಿ, ದೇಶದಲ್ಲಿ ಪ್ರತಿಭಾ ಪಲಾಯನ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಈ ಪ್ರಕ್ರಿಯೆ  ಮಾರಕವಾಗಿದೆ. ಮಾತೃನೆಲದಲ್ಲಿ ಹುಟ್ಟಿ ಬೆಳೆದು ವಿದ್ಯೆ ಕಲಿತು ಅದರ ಲಾಭವನ್ನು ಬೇರೆ ದೇಶದಲ್ಲಿ ಮಾಡುವುದು ಎಷ್ಟರಮಟ್ಟಿಗೆ ಸರಿ. ಇದೊಂದು ಜನ್ಮ ಹಾಗೂ ಸಂಸ್ಕಾರ ಕೊಟ್ಟ ದೇಶಕ್ಕೆ ಮಾಡಿದ ದ್ರೋಹವೇ ಸರಿ. ದೇಶದ ಅಭಿವೃದ್ಧಿಗೆ ಶ್ರಮಿಸದೇ ಯಾವುದೋ ಒಂದು ಆಮೀಷಕ್ಕೆ ಒಳಗಾಗಿ ವಿದೇಶಕ್ಕೆ ಹೋಗಿ ನೆಲೆಸುವವರು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಸ್ವಾತಂತ್ರ್ಯ ಯೋಧರು ಹಾಗೂ ಯೋಧರ ಪತ್ನಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಜವಳಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಹೊಳೆಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಕೊಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ, ಇತರರು ಹಾಜರಿದ್ದರು.

 ಕೆ.ಎನ್. ಮುಳಗುಂದ ನಿರೂಪಿಸಿದರು. ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.