ADVERTISEMENT

ಹಳ್ಳಿಗರೇ ನಿಜವಾದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2011, 6:10 IST
Last Updated 1 ನವೆಂಬರ್ 2011, 6:10 IST
ಹಳ್ಳಿಗರೇ ನಿಜವಾದ ಕನ್ನಡಿಗರು
ಹಳ್ಳಿಗರೇ ನಿಜವಾದ ಕನ್ನಡಿಗರು   

ಯಲಬುರ್ಗಾ: ಕನ್ನಡ ನೆಲ, ಜಲ, ಭಾಷೆ ಕುರಿತು ಮಾತನಾಡದೆ ಮೈಗೂಡಿಸಿಕೊಂಡು ಬದುಕು ಕಟ್ಟಿಕೊಂಡ ನಿಜವಾದ ಕನ್ನಡಿಗರು ಗ್ರಾಮೀಣ ಪ್ರದೇಶದಲ್ಲಿದ್ದಾರೆ, ಸಾಹಿತ್ಯಾಸಕ್ತಿ, ಸಂಸ್ಕೃತಿ ಹಾಗೂ ಸ್ವಾಭಿಮಾನ ಹೆಚ್ಚಾಗಿ ಕಂಡು ಬರುತ್ತಿರುವುದು ಗ್ರಾಮೀಣ ಜನರಲ್ಲಿ ಮಾತ್ರ ಎಂದು 7ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ವಿ.ಬಿ. ರಡ್ಡೇರ ಹೇಳಿದರು.

ತಾಲ್ಲೂಕಿನ ಬಳೂಟಗಿ ಗ್ರಾಮದಲ್ಲಿ ಸೋಮವಾರ ನಡೆದ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, `ಯಾವುದೇ ಅನ್ಯ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಮಾತೃ ಭಾಷೆಯನ್ನು ನಂಬಿ ಬದುಕು ರೂಪಿಸಿಕೊಂಡವರಿಗಿಂತಲೂ ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆದು ಮತ್ತು ಮಕ್ಕಳಿಗೂ ಅದೇ ಭಾಷೆಯಲ್ಲಿ ಶಿಕ್ಷಣ ಕೊಡಿಸುವಂತ ನಿರಭಿಮಾನಿ ಕನ್ನಡಿಗರೇ ಕನ್ನಡದ ಅಳಿವು ಉಳಿವಿನ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ವರ್ತನೆಗಳಿಂದಲೇ ಕನ್ನಡ ಭಾಷೆಗೆ ದುಃಸ್ಥಿತಿ ಬಂದೊದಗಿದೆ~ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸೇವೆಯ ಮೂಲಕ ಜ್ಞಾನಪೀಠ ಪ್ರಶಸ್ತಿ ಪಡೆಯುವವರ ಸಂಖ್ಯೆ ಹೆಚ್ಚಾದ ಸಂತೋಷದ ಸಂಗತಿ ಒಂದಡೆಯಾದರೆ, ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ವಿಸ್ತಾರಗೊಳ್ಳುತ್ತಿರುವ ಆಂತಕದ ಸಂಗತಿ ಮತ್ತೊಂದೆಡೆ. ಖಾಸಗಿ ಶಾಲೆಗಳಿಗೆ ಸರ್ಕಾರ ತೋರುವ ಪ್ರೀತಿ ಮಮಕಾರದ ಪ್ರತಿಫಲವಾಗಿ ಸರ್ಕಾರಿ ಶಾಲೆಗಳು ಮಾಯವಾಗುತ್ತಿವೆ. ಸರ್ಕಾರದ ಈ ಕೆಟ್ಟ ಧೋರಣೆಯೇ ನಾಡ ಭಾಷೆಯ ಅವನತಿಗೆ ಪ್ರಮುಖ ಕಾರಣ ಎನ್ನಬಹುದು.

 ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಗೊಳ್ಳದೇ ಹೋದರೆ ಕನ್ನಡ ಸಂಸ್ಕೃತಿಯ ಹೆಬ್ಬಾಗಿಲು ಮುಚ್ಚಿದಂತೆಯೇ ಸರಿ ಎಂದು ಅಭಿಪ್ರಾಯಪಟ್ಟರು.

ಡಾ. ನಂಜುಂಡಪ್ಪ ವರದಿ ಪ್ರಕಾರ ತೀರಾ ಹಿಂದುಳಿದ ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದು ಸರ್ಕಾರದ ಕರ್ತವ್ಯವಾಗಿದೆ.

ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಕರಿಗೆ ಹಾಗೂ ಇನ್ನಿತರ ಕ್ಷೇತ್ರಗಳ ಪ್ರಗತಿಗಾಗಿ 371ನೇ ಕಲಂ ಜಾರಿಗೊಳಿಸುವುದು ತೀರಾ ಅಗತ್ಯವಿದೆ.

ರಾಜ್ಯಮಟ್ಟದಲ್ಲಿಯೇ ವಿಶೇಷ ರೀತಿಯಲ್ಲಿ ಗುರುತಿಸಲ್ಪಡುವಂತಹ ಯಲಬುರ್ಗಾ ತಾಲ್ಲೂಕು ಹಿಂದುಳಿದ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಂದಿದ ತಾಲ್ಲೂಕು ಎನ್ನುವುದೇ ಸೂಕ್ತ ಎಂದು ಸಮ್ಮೇಳಾಧ್ಯಕ್ಷರು ನುಡಿದರು.

ಸಮಾರಂಭಕ್ಕೆ ಚಾಲನೆ ನೀಡಿದ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ ಮಾತನಾಡಿ, ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನಾಡು, ನುಡಿ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಹಾಗೂ ಸ್ವಾಭಿಮಾನ ನೆಲೆಗೊಳ್ಳುತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಸೇರಿದಂತೆ ಅನೇಕರು ಮಾತನಾಡಿದರು.

ಮಾಜಿ ಸಂಸದ ಬಸವರಾಜ ರಾಯರೆಡ್ಡಿ, ಪತ್ರಕರ್ತ ಗಂಗಾಧರ ಕುಷ್ಟಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಈರಪ್ಪ ಕುಡಗುಂಟಿ, ಅಶೋಕ ತೋಟದ, ಶ್ಯಾಮೀದಸಾಬ ಚಳ್ಳಾರಿ, ರಾಮಣ್ಣ ಸಾಲಭಾವಿ, ಯಂಕಣ್ಣ ಯರಾಶಿ, ಶಿವಶಂಕರ ದೇಸಾಯಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸೀತಾ ಹಲಗೇರಿ, ತಹಸೀಲ್ದಾರ ಈ,ಡಿ. ಭೃಂಗಿ, ಸಾಹಿತಿ ಮಹಾಂತೇಶ ಮಲ್ಲನಗೌಡ, ಮುನಿಯಪ್ಪ ಹುಬ್ಬಳ್ಳಿ, ನವೀನ ಗುಳಗಣ್ಣವರ್ ಮತ್ತಿತರರು ಪಾಲ್ಗೊಂಡಿದ್ದರು.  ಶಿಕ್ಷಕ ಬಸವರಾಜ ಕೊಂಡಗುರಿ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.