ADVERTISEMENT

ಹಳ್ಳ ಹಿಡಿದ ಯೋಜನೆಯ ಕರ್ಮಕಾಂಡ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 7:05 IST
Last Updated 19 ಫೆಬ್ರುವರಿ 2011, 7:05 IST

ಗಂಗಾವತಿ: ‘ಕೊಪ್ಪಳ ತಾಲ್ಲೂಕಿನಲ್ಲಿ ಕೈಗೊಳ್ಳಲಾದ ಹಿರೇಹಳ್ಳದ ಸೇತುವೆ ಮತ್ತು ನಾಲಾ ನಿರ್ಮಾಣ ಕಾಮಗಾರಿಯಲ್ಲಿ ಕನಿಷ್ಟ ರೂ, 100 ಕೋಟಿ ಮೊತ್ತದ ಅವ್ಯವಹಾರ ಆಗಿದೆ’ ದಾಖಲೆಗಳ ಸಮೇತ ಇಂತಹದೊಂದು ದೂರು ಇಲ್ಲಿ ದಾಖಲಾದಾಗ ಸ್ವತಃ ಲೋಕಾಯುಕ್ತ ಅಧಿಕಾರಿಗಳು ದಂಗಾದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳಾದ ಎಲ್.ವೈ. ಶಿರಕೋಳ ಮತ್ತು ಸಲೀಂಪಾಶ (ವೃತ್ತ ನೀರಿಕ್ಷಕರು) ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 14 ಪ್ರಕರಣಗಳನ್ನು ದೂರನ್ನು ದಾಖಲಿಸಿಕೊಂಡರು. ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅದರಲ್ಲಿ ಹೆಚ್ಚಿನವು ನಗರಸಭೆಗೆ ಸೇರಿದ್ದವು.

ರೂ, 100 ಕೋಟಿ: ‘ಕೊಪ್ಪಳದ ಹಿರೇಹಳ್ಳದ ಯೋಜನೆಯಲ್ಲಿ ಚುನಾಯಿತ ಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಗುತ್ತಿಗೆದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕನಿಷ್ಠ ರೂ, 100 ಕೋಟಿ ಮೊತ್ತದ ಅವ್ಯವಹಾರ ನಡೆಸಿದ್ದಾರೆ’ ಎಂದು ಮುನಿರಾಬಾದಿನ ವೆಂಕಟೇಶ ಎಂಬುವರು ದೂರು ನೀಡಿದರು. ದೂರು ಸ್ವೀಕರಿಸಿದ ಲೋಕಾಯುಕ್ತರು ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ದಂಗಾದರು. ಯೋಜನೆಯ ನಕ್ಷೆ, ಮಂಜೂರಾತಿ, ಹೇಗೆ ಸರ್ಕಾರದ ಹಣ ದುರ್ಬಳಿಕೆ ಆಗಿದೆ ಎಂಬುವುದು ದೂರಿನಲ್ಲಿ ಸ್ಪಷ್ಟಪಡಿಸಲಾಗಿತ್ತು.

ತಮ್ಮ ವ್ಯಾಪ್ತಿ ಮೀರಿದ್ದರಿಂದ ಲೋಕಾಯುಕ್ತರು, ದೂರುದಾರನಿಗೆ ಫಾರಂ ನಂಬರ್ 19 ಕೊಟ್ಟು ನೇರವಾಗಿ ಲೋಕಾಯುಕ್ತ ನ್ಯಾಯಮೂರ್ತಿಗೆ ದೂರು ಸಲ್ಲಿಸುವಂತೆ ಪ್ರಕರಣಕ್ಕೆ ಪೂರಕವಾಗಬಲ್ಲ ಸಲಹೆ ಸೂಚನೆಗಳನ್ನು ನೀಡಿದರು. ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಸ್ಥಳ ನಿವೇಶನಗಳಾಗಿ ಪರಿವರ್ತಿಸಿ ನಗರಸಭೆಯ ಅಧಿಕಾರಿಗಳು ಮಾರಿದ್ದಾರೆ ಎಂದು ದೇವರಮನಿದೇವಪ್ಪ, ಅವ್ಯವಹಾರ ನಡೆಯುತ್ತಿದೆ. ಕಂದಾಯ ವಸೂಲಿ ಅಕ್ರಮವಾಗಿದೆ ಎಂದು ಅಣ್ಣೋಜಿ ರಾವ್ ದೂರಿದರು. ಆರ್ಹಾಳದ ಅಕ್ರಮ ಗಣಿಗಾರಿಕೆ, ಇಂದ್ರ ಪವರ್ ಘಟಕದಿಂದ ಧೂಳು, ನಗರದಲ್ಲಿ ರಸ್ತೆ ವಿಸ್ತರಣೆ, ವಿರುಪಾಪುರ ಗಡ್ಡೆಯಲ್ಲಿನ ಅಕ್ರಮ ರೆಸಾರ್ಟ್‌ಗಳ ತೆರವಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕವು ನಾಲ್ಕು ದೂರು ದಾಖಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.