ADVERTISEMENT

ಹೆಸರು ಬೆಳೆಗೆ ಕೆಸರು ಹುಳು ಕಾಟ

ಶ್ರಿನಿವಾಸ ಎಂ.ಬಿ.ಬೆಂಗಳೂರು .
Published 12 ಅಕ್ಟೋಬರ್ 2013, 8:22 IST
Last Updated 12 ಅಕ್ಟೋಬರ್ 2013, 8:22 IST

ಗಂಗಾವತಿ: ತಾಲ್ಲೂಕಿನ ಮಳೆಯಾಶ್ರಿತ (ಖುಷ್ಕಿ) ಒಣ ಪ್ರದೇಶದ ನಾಲ್ಕು ಹೋಬ­ಳಿ­ಗಳಲ್ಲಿ  ಬೆಳೆಯಲಾಗಿರುವ ಮುಂಗಾರು ಹಂಗಾಮಿನ ಹೆಸರು ಬೆಳೆಗೆ ರಸ ಹೀರುವ ಕೆಸರು (ಬಣ್ಣ) ಹುಳುವಿನ ಕಾಟ ಅಧಿಕವಾಗಿದೆ. ಸಾಕಷ್ಟು ಉಪ­ಚಾರದ ಬಳಿಕವೂ ಕೀಟ ಭಾದೆ ನಿಯಂ­ತ್ರಣಕ್ಕೆ ಬಾರದ್ದರಿಂದ  ರೈತರು ಸಂಧಿಗ್ಧತೆಗೆ ಸಿಲುಕಿದ್ದಾರೆ.

ಒಣ ಬೇಸಾಯ ಅಥವಾ ಖುಷ್ಕಿ ಪ್ರದೇಶ ಎನಿಸಿಕೊಂಡಿರುವ ಮಳೆಯಾ­ಶ್ರಿತ ತಾಲ್ಲೂಕಿನ ಹುಲಿಹೈದರ, ನವಲಿ, ಕನಕಗಿರಿ ಮತ್ತು ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಕೆಲ ಭಾಗದಲ್ಲಿ ಮುಖ್ಯ ಹಾಗೂ ಇತರೆಡೆ ಉಪ ಬೆಳೆಯನ್ನಾಗಿ ಒಟ್ಟು 650 ಹೆಕ್ಟೇರು ಪ್ರದೇಶದಲ್ಲಿ ಹೆಸರು ಬೆಳೆದಿದ್ದಾರೆ.

ಕಳೆದ ಜೂನ್‌–ಜುಲೈನಲ್ಲಿ ನಾಟಿ ಮಾಡಿದ ಹೆಸರು ಬೆಳೆ ಇದೀಗ ಕೊಯ್ಲಿಗೆ ಬಂದಿದೆ. ಆದರೆ ತೆನೆಕಟ್ಟಿ ಕಾಳಾಗುವ ಹಂತದಲ್ಲಿ ಅಂಟಿಕೊಂ­ಡಿರುವ ರಸಹೀರುವ ಕೀಟದಿಂದಾಗಿ ರೈತರು ನಿರೀಕ್ಷಿಸಿದ ರೀತಿಯಲ್ಲಿ ಬೆಳೆ ಫಸಲು ಅಥವಾ ಇಳುವರಿ ಬಂದಿಲ್ಲ.

ರೋಗ ಲಕ್ಷಣ: ಹೆಸರು ಬೆಳೆಗೆ ಅಂಟಿ­ಕೊಂಡಿರುವ ರೋಗಕ್ಕೆ ಗ್ರಾಮೀಣ ಭಾಗದಲ್ಲಿ ಮುಟ್ಟಿಗೆ, ಮುದುಡು, ರಸ ಹೀರುವ, ಕೆಸರು ರೋಗ ಹೀಗೆ ಹತ್ತಾರು ವಿಧದಲ್ಲಿ ಕರೆಯುತ್ತಾರೆ. ರೋಗ ಭಾದಿಸಿದ ಗಿಡದ ಎಲೆಗಳು ಕಾಂತಿ ಹೀನ­ವಾಗಿದ್ದು, ಮುದುಡಿ ಸುಕ್ಕುಗಟ್ಟಿರುತ್ತವೆ.

ಕಾಯಿಯ ಗೊಂಚಲಿನಲ್ಲಿ ಸಣ್ಣ ಪ್ರಮಾಣದ ಹುಳುಗಳ ರಾಶಿ ಕಂಡು ಬರುತ್ತಿದ್ದು, ರಸ ಹೀರುತ್ತವೆ. ಕೆಲ ಬಾರಿ ಹೆಸರು ಕಾಯಿಯೊಳಗೆ ನುಸುಳುತ್ತಿರುವ ಹುಳುಗಳು ಕಾಳನ್ನು ಜೊಳ್ಳಾಗಿಸುವುದು ಇಲ್ಲವೆ ತಿಂದು ಹಾಕುತ್ತಿವೆ ಎಂದು ರೈತರು ತಿಳಿಸಿದ್ದಾರೆ.

ಸತತ ಯತ್ನ: ‘ರಸ ಹೀರುವ ಕಾಯಿ­ಲೆ­ಯಿಂದ ಇಳುವರಿ ಕಡಿಮೆಯಾ­ಗು­ತ್ತಿದೆ. ಕೀಟ ನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ಸಿಂಪ­ಡಣೆಯಿಂದಾಗಿ ಕೀಟ ಭಾದೆ ಇನ್ನೊಂದು ಗಿಡಕ್ಕೆ ವ್ಯಾಪಿಸದಂತೆ ಮಾತ್ರ ತಡೆಯ­ಬಹುದು’ ಎಂದು ವೆಂಕಟಗಿರಿ–ಬಂಡ್ರಾ­ಳದ ರೈತ ನಜೀರಸಾಬ ಕಂಪ್ಲಿ ಹೇಳಿದರು.

‘ಕಾಯಿಲೆಗೀಡಾದ ಹೊಲದಲ್ಲಿನ ಹೆಸರು ಗಿಡದ ಎಲೆಗಳು ಮುದುಡಿ­ರುತ್ತವೆ. ಕೆಲ ಬಾರಿ ಮುದುಡಿದ ಎಲೆ­ಯೊಳಗೆ ಕೀಟ ಸಂತಾನೋತ್ಪತ್ತಿ ಮಾಡಿ ಇಡೀ ಗಿಡವನ್ನು ನಾಶ ಮಾಡುತ್ತಿದೆ’ ಎಂದು ಉಡಮಕಲ್‌ ಗ್ರಾಮದ
ರೈತ ವಿರೇಶಪ್ಪ ಪವಾಡಶೆಟ್ಟಿ  ಹೇಳಿದರು.

ರೈತ ಕೇಂದ್ರ ಸಂಪರ್ಕಿಸಿ:  ಈಗಾಗಲೆ ಮುಂಗಾರು ಹಂಗಾಮಿಗೆ ತಾಲ್ಲೂಕಿನಾ­ದ್ಯಂತ ನಾಟಿ ಮಾಡಿದ್ದ ಸುಮಾರು 1,625 ಎಕರೆ  ಪ್ರದೇಶದ ಪೈಕಿ ಬಹು­ತೇಕ ಭಾಗದ ಹೆಸರನ್ನು ಕಟಾವು ಮಾಡ­ಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ನಾಯಕ ತಿಳಿಸಿದ್ದಾರೆ.

ಹೆಸರಿಗೆ ರಸಹೀರುವ, ಎಲೆ ತಿನ್ನುವ ಮತ್ತು ಹೇನು ಭಾದೆ ಸಹಜ. ಹೆಸರಿಗೆ ತಗಲಿರುವ ಕೀಟದಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಾಕಷ್ಟು ಉಪಚಾರದ  ಔಷಧಿ ಸಿದ್ದವಿದೆ  ಎಂದು ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.