ADVERTISEMENT

ಹೈ-ಕ: ಚಳಿಗಾಲದ ಅಧಿವೇಶನದಲ್ಲಿ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:10 IST
Last Updated 4 ಅಕ್ಟೋಬರ್ 2011, 9:10 IST

ಗಂಗಾವತಿ:ಹೈದಿರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಪಡೆಯುವುದು ನಮ್ಮ ಹಕ್ಕಾಗಿದೆ. ಈ ನ್ಯಾಯೋಚಿತ ಹೋರಾಟಕ್ಕೆ ಈ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ತೀವ್ರ ಸ್ವರೂಪ ನೀಡಲಾಗುವುದು ಎಂದು ಸಮಿತಿ ತಾಲ್ಲೂಕು ಅಧ್ಯಕ್ಷ ಎ.ಕೆ. ಮಹೇಶಕುಮಾರ ಹೇಳಿದರು.

ನಗರದ ಕೊಲ್ಲಿ ನಾಗೇಶ್ವರ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹೈದಿರಾಬಾದ್-ಕರ್ನಾಟಕ ಹೋರಾಟ ಸಮಿತಿಯಿಂದ 371ನೇ ಕಲಂ ತಿದ್ದುಪಡಿಗೆ ಏರ್ಪಡಿಸಿದ್ದ ಜನ ಜಾಗೃತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಮ್ಮ ಭಾಗಕ್ಕೆ ಇಲ್ಲಿವರೆಗೂ ಆಗಿರುವ ಅನ್ಯಾಯ ಸರಿ ಪಡಿಸುವ ನಿಟ್ಟಿನಲ್ಲಿ ಹೈ-ಕ ಹೋರಾಟ ಸಮಿತಿ ಹಮ್ಮಿಕೊಳ್ಳುವ ಧರಣಿ, ಸತ್ಯಾಗ್ರಹ ಮೊದಲಾದ ಕಾರ್ಯದಲ್ಲಿ ಯುವ ಜನ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಎಸ್. ಶಿವರಾಮಗೌಡ, `ಸೌಲಭ್ಯ ದೊರೆಯದಿದ್ದಲ್ಲಿ ವಿದ್ಯಾರ್ಥಿಗಳು ಹೇಗೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರೋ, 371ನೇ ಕಲಂ ತಿದ್ದುಪಡಿಗೆ ಅದೇ ತೆರನಾದ ಹೋರಾಟ ಮಾಡಿ ಸಾಧಿಸಿ~ ಎಂದು ವಿದ್ಯಾರ್ಥಿಗಳಲ್ಲಿ ಕಿಚ್ಚು ಹೊತ್ತಿಸಿದರು. 

ಹೈ-ಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಹೈ-ಕ ಭಾಗ ಶಿಕ್ಷಣ, ಉದ್ಯೋಗ, ಸಮಾಜಿಕ, ಆರ್ಥಿಕ, ಹಾಗೂ ರಾಜಕೀಯ ರಂಗದಲ್ಲಿ ಹಿಂದುಳಿದಿದೆ. ಈ ಭಾಗದ ಅಭಿವೃದ್ಧಿಗಾಗಿ ಕೇಂದ್ರ 371ನೇ ಕಲಂ ಮೂಲಕ ಸಾಮಾಜಿಕ ನ್ಯಾಯ ನೀಡಬೇಕಿದೆ ಎಂದರು. 

ಹೈ-ಕ ಹೋರಾಟ ಸಮಿತಿಯ ರಾಯಚೂರು ಜಿಲ್ಲಾ ಅಧ್ಯಕ್ಷ ರಜಾಕ್ ಉಸ್ತಾದ್ ಮಾತನಾಡಿ, `ಕರ್ನಾಟಕ ಏಕೀಕರಣದ ಬಳಿಕ ಮೈಸೂರು ರಾಜ್ಯ ನಮ್ಮನ್ನು ಎಂದಿಗೂ ತಮ್ಮವರಂತೆ ಕಾಣಲೇ ಇಲ್ಲ~ ಎಂದು ಅಂಕಿ ಅಂಶಗಳ ಸಹಿತ ಆರೋಪ ದೃಢಪಡಿಸಿದರು.

ಕೃಷ್ಣೆ ಕಾವೇರಿಗಿಂತ ನಾಲ್ಕಾರು ಪಟ್ಟು ದೊಡ್ಡದು. ಆದರೆ ಇಂದಿಗೂ ಕನ್ನಡದ ಜೀವನದಿ ಕಾವೇರಿ. ಚಿನ್ನ ಉತ್ಪಾದನೆಯಲ್ಲಿ ಹಟ್ಟಿಯದ್ದು ದೇಶದಲ್ಲಿ ನಂಬರ್ 2ನೇ ಸ್ಥಾನ. ಆದರೆ ಚಿನ್ನದ ಗಣಿ ಎಂದರೆ 20 ವರ್ಷದ ಹಿಂದೆ ಮುಚ್ಚಿದ ಕೋಲಾರ ಎಂಬ ತಾರತಮ್ಯವಿದೆ. ಇದು ನಿವಾರಣೆಯಾಗಬೇಕು ಎಂದರು.

ಶಾಸಕರಾದ ಪರಣ್ಣ ಮುನವಳ್ಳಿ ಮತ್ತು ಶಿವರಾಜ ತಂಗಡಗಿ ಮಾತನಾಡಿದರು. ಪ್ರಾಚಾರ್ಯ ವೆಂಕಟರಮಣ ರೆಡ್ಡಿ, ಸಿಡಿಸಿ ಸದಸ್ಯ ಸೋಮನಾಥ ಪಟ್ಟಣಶೆಟ್ಟಿ ಇತರರಿದ್ದರು. ಉಪನ್ಯಾಸಕ ಪವನಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.