ADVERTISEMENT

19ರಂದು ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 9:20 IST
Last Updated 7 ಮಾರ್ಚ್ 2011, 9:20 IST

ಕೊಪ್ಪಳ: ಹೈದರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಬಲ್ಲ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಹೋರಾಟ ಕುರಿತಂತೆ ಅಂತಿಮ ನಿರ್ಣಯ ಕೈಗೊಳ್ಳಲು ಮಾ. 19ರಂದು ನಗರದಲ್ಲಿ ಸಭೆ ನಡೆಯಲಿದೆ.

ಈ ಸಂಬಂಧ ಚರ್ಚಿಸಲು ನಗರದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಅಲ್ಲದೇ, ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರವುದರಿಂದ ಈ ಭಾಗದ ಜನತೆಗೆ ಆಗಬಹುದಾದ ಅನುಕೂಲತೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹ ಸಭೆ ತೀರ್ಮಾನಿಸಿತು.

19ರಂದು ನಗರದಲ್ಲಿ ಸಭೆ ನಡೆಸಬೇಕು. ನಗರದ ವಿವಿಧ ಸಂಘಟನೆಗಳು ಹಾಗೂ ವಿವಿಧ ಸಮಾಜಗಳ ಗಣ್ಯರ ಜೊತೆಗೆ ಜಿಲ್ಲೆಯ ಇತರ ಮೂರು ತಾಲ್ಲೂಕುಗಳಿಂದ ಸಹ ಜನರನ್ನು ಆಹ್ವಾನಿಸಬೇಕು. ಸರದಿ ಉಪವಾಸ ಸತ್ಯಾಗ್ರಹ ನಡೆಸುವ ಜೊತೆಗೆ ಇತರೆ ಸ್ವರೂಪದ ಹೋರಾಟ ನಡೆಸುವುದು ಹಾಗೂ ಯಾವ ದಿನದಿಂದ ಈ ಹೋರಾಟಕ್ಕೆ ಚಾಲನೆ ನೀಡಬೇಕು ಎಂಬ ಮಹತ್ವದ ವಿಷಯ ಕುರಿತು ಅಂದಿನ ಸಭೆಯಲ್ಲಿ ಚರ್ಚಿಸಲು ಸಹ ಸಭೆ ಗೊತ್ತುವಳಿ ಸ್ವೀಕರಿಸಿತು. ಸಭೆಯಲ್ಲಿ ವಿಷಯ ಮಂಡನೆ ಮಾಡಿದ ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ, ಈಗಾಗಲೇ ದೇಶದಲ್ಲಿ ಯಾವ ರಾಜ್ಯಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ಈ ವಿಧಿಗೆ ತಿದ್ದುಪಡಿ ತರಲಾಗಿದೆ ಎಂಬುದನ್ನು ಸಭೆಗೆ ವಿವರಿಸಿದರು.

ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ,ಹೋರಾಟದ ನೆಲೆಗಟ್ಟು ಗಟ್ಟಿಯಾಗದ ಹೊರತು ನಮ್ಮ ಉದ್ದೇಶ ಈಡೇರದು. ಹೀಗಾಗಿ ಸಮಾಜದ ಎಲ್ಲಾ ಸ್ತರದ ಜನರನ್ನು ಆಹ್ವಾನಿಸಿ, ಚರ್ಚಿಸಿ ಹೋರಾಟ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಡಾ.ಎಂ.ಬಿ.ರಾಂಪೂರೆ ಮಾತನಾಡಿ, ರಾಜಕೀಯ ಮುಖಂಡರನ್ನು ದೂರ ಇಟ್ಟು ಮಾಡುವ ಹೋರಾಟಕ್ಕೆ ಪ್ರತಿಫಲ ಸಿಗದು. ನಮ್ಮ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತುವಂತೆ ಸಂಸದರ ಮೇಲೆ ಒತ್ತಡ ತರುವ ಕಾರ್ಯ ಹೋರಾಟದಿಂದ ಆಗಬೇಕು ಎಂದರು. ಇನ್ನೋರ್ವ ಮುಖಂಡ ಅಂದಣ್ಣ ಅಗಡಿ ಮಾತನಾಡಿ, ಸರದಿ ನಿರಶನ ಸತ್ಯಾಗ್ರಹವೇ ಸರಿಯಾದ ಹೋರಾಟದ ಮಾರ್ಗ ಎಂದು ಪ್ರತಿಪಾದಿಸಿದರು.

ಗವಿಸಿದ್ದಪ್ಪ ಕೊಪ್ಪಳ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಗೊಂಡಬಾಳ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರೆಡ್ಡಿ ಅಳವಂಡಿ, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಜಿ.ಎಸ್.ಗೋನಾಳ, ಜಿಲ್ಲಾ ಘಟಕದ ಕೋಶಾಧ್ಯಕ್ಷ ರಾಜಶೇಖರ ಅಂಗಡಿ, ನಗರಸಭಾ ಸದಸ್ಯ ವೀರಣ್ಣ ಹಂಚಿನಾಳ ಹಾಗೂ ಇತರರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.