ADVERTISEMENT

25-26ರಂದು ಸರ್ಕಾರಿ ನೌಕರರ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 5:30 IST
Last Updated 9 ಜೂನ್ 2011, 5:30 IST

ಕೊಪ್ಪಳ: ಇದೇ 25 ಮತ್ತು 26ರಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಕೂಟ ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣ ಅಥವಾ ಮುನಿರಾಬಾದ್‌ನಲ್ಲಿ ನಡೆಸುವ ಕುರಿತು ಸ್ಥಳ ಪರಿಶೀಲನೆ ಮಾಡಿ ಅಭಿಪ್ರಾಯ ಮಂಡಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕ್ರೀಡಾಕೂಟದ ಆಯೋಜಕರಿಗೆ ಸೂಚನೆ ನೀಡಿದರು.

ಕ್ರೀಡಾಕೂಟ ನಡೆಸುವ ಕುರಿತಂತೆ ಚರ್ಚಿಸಲು ಈಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿಯ ಸರ್ಕಾರಿ ನೌಕರರ ಕ್ರೀಡಾಕೂಟ ಅತ್ಯಂತ ವ್ಯವಸ್ಥಿತವಾಗಿ ಜರುಗಬೇಕು. ಪ್ರತಿ ಸಲ ನಗರದಲ್ಲಿಯೇ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸುತ್ತಾ ಬಂದಿದೆ.

ಈ ಬಾರಿ ಮುನಿರಾಬಾದ್‌ನ  ಪ್ರಾಥಮಿಕ ಶಾಲೆ ಆವರಣದಲ್ಲಿ ಅಥ್ಲೆಟಿಕ್ಸ್, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಹೊರಾಂಗಣ ಕ್ರೀಡೆಗಳು ಹಾಗೂ ಸಂಗೀತ ಸ್ಪರ್ಧೆ, ಚೆಸ್,  ಕೇರಂ ಸೇರಿದಂತೆ ವಿವಿಧ ಒಳಾಂಗಣ ಕ್ರೀಡೆಗಳನ್ನು ಪಂಪಾವನದ ಸುಂದರ ಪರಿಸರದಲ್ಲಿ ಏರ್ಪಡಿಸುವುದು ಸೂಕ್ತ.

ಈ ಬಾರಿಯ ಕ್ರೀಡಾಕೂಟದ ಮನರಂಜನೆಯನ್ನು ಸರ್ಕಾರಿ ನೌಕರರೂ ಸೇರಿದಂತೆ ಅವರ ಕುಟುಂಬ   ವರ್ಗವೂ ಸಹ ಪಾಲ್ಗೊಂಡು ಸವಿಯುವಂತಾಗಬೇಕು ಎಂದ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಮಾತನಾಡಿ, ಕ್ರೀಡಾಕೂಟದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಅವರನ್ನು ಆಹ್ವಾನಿಸಲಾಗುವುದು ಎಂದರು.

ಸಂಸದ ಶಿವರಾಮಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಜಿಲ್ಲೆಯ ಎಲ್ಲ ಶಾಸಕರನ್ನು ಸಹ   ಆಹ್ವಾನಿಸಲಾಗುವುದು.

ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ            ಸಹಾಯಕ ನಿರ್ದೇಶಕ ವಿಲಾಸ್  ಘಾಡಿ ಅವರಿಗೆ ಜವಾಬ್ದಾರಿ ನೀಡಲಾಗುವುದು ಎಂದರು.

ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ನಾಗರಾಜ್, ಶರಣಬಸನಗೌಡ, ಬಿ.ಎಫ್.ಬೀರನಾಯ್ಕರ್, ವಿ.ಎನ್.ಘಾಡಿ, ದೈಹಿಕ ಶಿಕ್ಷಣ ಅಧಿಕಾರಿ ಸುದರ್ಶನ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳ ಪರಿಶೀಲನೆ:
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮುನಿರಾಬಾದ್‌ಗೆ ತೆರಳಿದ ತಂಡ, ರಾಜ್ಯ ಸರ್ಕಾರಿ              ನೌಕರರ ಜಿಲ್ಲಾ ಮಟ್ಟದ ಕ್ರೀಡಾ  ಕೂಟ ಆಯೋಜನೆಗಾಗಿ ಪ್ರಾಥಮಿಕ ಶಾಲಾ ಮೈದಾನ, ಪಂಪಾವನದ ಒಳಾಂಗಣದಲ್ಲಿ ಸಂಚರಿಸಿ, ಸ್ಥಳ ಪರಿಶೀಲನೆ ನಡೆಸಿತು. ಪ್ರಭಾರಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂ  ರಾವ್ ಬಿ.ವಿ., ಕಾಸಿಂಸಾಬ ಸಂಕನೂರು, ಎನ್.ಎಸ್.ಪಾಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.