ADVERTISEMENT

ಕೊಪ್ಪಳ: 300 ಚೀಲ ನಕಲಿ ಗೊಬ್ಬರ ಜಪ್ತಿ

ಜಿಲ್ಲೆಯ ವಿವಿಧೆಡೆ ಕೃಷಿ ಇಲಾಖೆ ಅಧಿಕಾರಿಗಳ ತಂಡದಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 4:47 IST
Last Updated 17 ಜೂನ್ 2021, 4:47 IST
ಗಂಗಾವತಿಯಲ್ಲಿ ನಕಲಿ ಗೊಬ್ಬರ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು
ಗಂಗಾವತಿಯಲ್ಲಿ ನಕಲಿ ಗೊಬ್ಬರ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು   

ಕೊಪ್ಪಳ: ‘ಜೈಕಿಸಾನ್ ಡಿಎಪಿ’ ಹೆಸರಿನಲ್ಲಿ ನಕಲಿ ರಸಗೊಬ್ಬರ ಸಂಗ್ರಹಿಸಿಟ್ಟಿದ್ದ ಗಂಗಾವತಿಯ ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಸುಮಾರು 300 ಚೀಲ ಗೊಬ್ಬರ ಜಪ್ತಿ ಮಾಡಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಜಾಗೃತ ದಳದ ಅಧಿಕಾರಿ ನಿಂಗಪ್ಪ, ಡಿವೈಎಸ್‍ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಪ್ರಾರಂಭದಲ್ಲಿ ಲಾರಿಯಲ್ಲಿ ತುಂಬಿದ್ದ ಗೊಬ್ಬರ ಪತ್ತೆ ಹಚ್ಚಿದ ಅಧಿಕಾರಿಗಳ ತಂಡ ಚಾಲಕನಿಂದ ಮಾಹಿತಿ ಪಡೆದು ಗೋದಾಮಿನ ಮೇಲೆ ದಾಳಿ ನಡೆಸಿದೆ.

ADVERTISEMENT

‘ಕಂಪನಿಯೊಂದರ ಹೆಸರಿನ ಖಾಲಿ ಚೀಲದಲ್ಲಿ ನಕಲಿ ಗೊಬ್ಬರ ತುಂಬಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇದರ ಹಿಂದೆ ಇರುವವರ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಗೋದಾಮಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಲಾರಿ ಚಾಲಕನ ವಿರುದ್ಧ ದೂರು ನೀಡಲಾಗಿದೆ. ಗೊಬ್ಬರದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ಗೊಬ್ಬರದ ಅಂಗಡಿಗಳ ಮಾಲೀಕರಿಗೆ ನೋಟಿಸ್

ಕನಕಗಿರಿ: ಕೊಪ್ಪಳ ಹಾಗೂ ಗಂಗಾವತಿಯ ಸಹಾಯಕ ಕೃಷಿ ನಿರ್ದೇಶಕರಾದ ಸಂತೋಷ ಪಟ್ಟದಕಲ್ ಹಾಗೂ ನಿಂಗಪ್ಪ ಅವರು ಪಟ್ಟಣದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿದರು.

ಬಳಿಕ ಮಾತನಾಡಿದ ಸಂತೋಷ ಪಟ್ಟದಕಲ್ ಹಾಗೂ ನಿಂಗಪ್ಪ ಅವರು,‘ಪಟ್ಟಣದ ವಿವಿಧ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿದ್ದು, ಕೃಷಿ ಪರಿಕರಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕದ ಗುಣ ನಿಯಂತ್ರಣ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ’ ಎಂದು ತಿಳಿಸಿದರು.

ಕೃಷಿ ಪರಿಕರ ಮಾರಾಟ ಮಳಿಗೆಗಳ ಪರಿಶೀಲನೆ ಸಮಯದಲ್ಲಿ ಕಂಡು ಬಂದ ನೂನ್ಯತೆಗಳಿಗೆ ಸಂಬಂಧಿಸಿದಂತೆ ಬಾಲಾಜಿ ಟ್ರೇಡಿಂಗ್ ಕಂಪನಿ, ರಾಘವೇಂದ್ರ ಸ್ವಾಮಿ ಫರ್ಟಿಲೈಸರ್, ಮಂಜುಶ್ರೀ ಅಗ್ರೋ ಏಜೆನ್ಸಿ, ಮಂಜುನಾಥ ಅಗ್ರೋ ಏಜೆನ್ಸಿ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ಟ್ರೇಡಿಂಗ್ ಅಂಗಡಿ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.

ತಾಲ್ಲೂಕಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಸಾಕಷ್ಟು ಪ್ರಮಾಣದಲ್ಲಿ ಸರಬರಾಜಾಗಿದ್ದು, ರೈತರು ಆತಂಕಗೊಳ್ಳಬಾರದು ಎಂದು ಅವರು ತಿಳಿಸಿದರು. ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಇತರೆ ಕೃಷಿ ಪರಿಕರಗಳನ್ನು ಮಾರಾಟ ಮಾಡಿದರೆ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಬೇಕು. ಕೃಷಿ ಪರಿಕರಗಳನ್ನು ಖರೀದಿಸುವಾಗ ಮಾರಾಟಗಾರರಿಂದ ರಶೀದಿ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.