ADVERTISEMENT

ಸಮೃದ್ಧ ಭಾರತಕ್ಕೆ ಕೈ ಜೋಡಿಸಲು ಕರೆ

ಧ್ವಜಾರೋಹಣ ನೆರವೇರಿಸಿದ ಸಚಿವೆ ಶಶಿಕಲಾ ಜೊಲ್ಲೆ ಕರೆ, ಇತಿಹಾಸದ ಚಿತ್ರಲೋಕ ಅನಾವರಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:44 IST
Last Updated 15 ಆಗಸ್ಟ್ 2022, 16:44 IST
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪಥ ಸಂಚಲನದ ತಂಡಗಳಿಂದ  ಮುಜುರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ ಅವರು ಗೌರವವಂದನೆ ಸ್ವೀಕರಿಸಿದರು
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪಥ ಸಂಚಲನದ ತಂಡಗಳಿಂದ  ಮುಜುರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ ಅವರು ಗೌರವವಂದನೆ ಸ್ವೀಕರಿಸಿದರು   

ಕೊಪ್ಪಳ: ‘ಭಾರತದ ಭವಿಷ್ಯ ಯುವಜನರ ಮೇಲೆ ಅವಲಂಬಿತವಾಗಿದ್ದು, ಅವರು ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕ ಮನೋಭಾವ ಮತ್ತು ಅಭಿಮಾನದಿಂದ ಹೆಜ್ಜೆ ಹಾಕಬೇಕು‘ ಎಂದು ರಾಜ್ಯ ಮುಜರಾಯಿ, ವಕ್ಫ್ ಹಾಗೂ ಹಜ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.

ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 76ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ‘ಎಲ್ಲರೂ ಸಮೃದ್ಧ ಭಾರತದ ಗುರಿ ಹೊಂದಬೇಕು. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಹೊಂದಲು ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದರು.

‘ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳಾಗಿರುವುದರಿಂದ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯಬೇಕು’ ಎಂದರು.

ADVERTISEMENT

‘ಅಂಜನಾದ್ರಿ ಬೆಟ್ಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ₹120 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಭೂ ಸ್ವಾಧೀನಕ್ಕೆ ಸಂಬಂಧಿಸಿ ರೈತರಿಗೆ ಅನ್ಯಾಯವಾಗದಂತೆ ಹಾಗೂ ಅಭಿವೃದ್ದಿಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ’ ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ, ತಹಶೀಲ್ದಾರ್‌ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪುಷ್ಪನಮನ: ಜಿಲ್ಲಾಡಳಿತ ಭವನದಲ್ಲಿ ಶಶಿಕಲಾ ಜೊಲ್ಲೆ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಇದ್ದರು.

ಪಥಸಂಚಲನ, ಸಾಧಕರಿಗೆ ಸನ್ಮಾನ

ಕೊಪ್ಪಳ: ಜಿಲ್ಲಾ ಮೈದಾನದಲ್ಲಿ ಪೊಲೀಸ್, ಎನ್.ಸಿ.ಸಿ., ಸೇವಾದಳ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಅರಣ್ಯ ಇಲಾಖೆ ಹಾಗೂ ಗೃಹ ರಕ್ಷಕ ದಳ ಸೇರಿದಂತೆ ಒಟ್ಟು 16 ತಂಡಗಳಿಂದ ನಡೆದ ಪಥಸಂಚಲನ ಆಕರ್ಷಕವಾಗಿತ್ತು. ಜ್ಞಾನಬಂಧು ಶಾಲೆ, ಕಾಲೇಜು ಹಾಗೂ ನಿವೇದಿತಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಸ್ವಾತಂತ್ರ್ಯ ಹೋರಾಟಗಾರರಾದ ಸುಮಂತರಾವ್ ಪಟವಾರಿ, ಹನುಮಂತಗೌಡ ಪಿ.ಪಾಟೀಲ, ಕೃಷ್ಣಾಚಾರ ಹಾಗೂ ಗಿರಿಜಮ್ಮ ಗುರುಲಿಂಗಯ್ಯಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ನಾಗರತ್ನ ರೇವಣಸಿದ್ದಪ್ಪ ಅಂಗಡಿ, ಗುರುಲಿಂಗಮ್ಮ ರಾಮಣ್ಣ ಗದ್ದಿ, ಮಹೇಶ್ವರಿ ಶರಣಪ್ಪ ಟೆಂಗುಂಟಿ, ನೀಲಮ್ಮ ರಮೇಶ ಶೆಟ್ಟರ್, ಶಿಲ್ಪ ಹನುಮಪ್ಪ ವಡಗೇರಿ, ಸ್ವಾತಿ ಮಾಣಿಕ್ ಬೊಮ್ಮಾನಿ ಅವರಿಗೆ ಲ್ಯಾಪ್‌ಟಾಪ್‌ ನೀಡಲಾಯಿತು.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಿದ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಕುಂತಲಾ ಪಾಟೀಲ್, ಗಂಗಾವತಿಯ ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.

ಸಚಿವೆಯಿಂದ ಮೊದಲ ಧ್ವಜಾರೋಹಣ

ಕೊಪ್ಪಳ ಜಿಲ್ಲಾ ಕೇಂದ್ರವಾದ ಬಳಿಕ ಇಲ್ಲಿ ಧ್ವಜಾರೋಹಣ ನೆರವೇರಿಸಿದ ಮೊದಲ ಸಚಿವೆ ಎನ್ನುವ ಹೆಗ್ಗಳಿಕೆಗೆ ಶಶಿಕಲಾ ಜೊಲ್ಲೆ ಅವರು ಪಾತ್ರರಾದರು.

ಕೊಪ್ಪಳ 1997ರಲ್ಲಿ ಜಿಲ್ಲಾ ಕೇಂದ್ರವಾಗಿ ರಚನೆಯಾಯಿತು. ಅಲ್ಲಿಂದ ಇಲ್ಲಿತನಕ ಯಾರೂ ಮಹಿಳಾ ಸಚಿವರು ಧ್ವಜಾರೋಹಣ ಮಾಡಿರಲಿಲ್ಲ.

ಪಥಸಂಚಲನದಲ್ಲಿ ಕಾಳಿದಾಸ ಪ್ರೌಢಶಾಲೆಯ ಸೇವಾದಳ ತಂಡ ಪ್ರಥಮ

ಎಸ್.ಎಫ್.ಎಸ್ ಶಾಲೆಯ ಗೈಡ್ಸ್ ತಂಡಕ್ಕೆ ದ್ವಿತೀಯ ಬಹುಮಾನ

ಮೂರನೇ ಸ್ಥಾನ ಗಳಿಸಿದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.