ADVERTISEMENT

ವಾಲ್ಮೀಕಿ ನಿಗಮ– ರೈತರ ಮಧ್ಯೆ ಜಟಾಪಟಿ

ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕಡಿಮೆ ಪೈಪ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:03 IST
Last Updated 12 ಜೂನ್ 2025, 16:03 IST
ಕುಷ್ಟಗಿಯಲ್ಲಿ ಗಂಗಾಕಲ್ಯಾಣ ಫಲಾನುಭವಿಗಳು ಹಾಗೂ ವಾಲ್ಮೀಕಿ ನಿಗಮ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿರುವುದು
ಕುಷ್ಟಗಿಯಲ್ಲಿ ಗಂಗಾಕಲ್ಯಾಣ ಫಲಾನುಭವಿಗಳು ಹಾಗೂ ವಾಲ್ಮೀಕಿ ನಿಗಮ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿರುವುದು   

ಕುಷ್ಟಗಿ: ‘ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಯಿಸಲಾಗಿರುವ ಕೊಳವೆಬಾವಿ ಫಲಾನುಭವಿಗಳಿಗೆ ಸಮರ್ಪಕವಾಗಿ ಸಲಕರಣೆಗಳನ್ನು ನೀಡದೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಅನ್ಯಾಯ ಎಸಗುತ್ತಿದ್ದಾರೆ’ ಎಂದು ಫಲಾನುಭವಿಗಳು ಆರೋಪಿಸಿದರು.

ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಪೆಟ್ರೋಲ್‌ಬಂಕ್‌ ಬಳಿ ಬಂದಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಡಿವಾಳಪ್ಪ ಅವರೊಂದಿಗೆ ರೈತರು ವಾಗ್ವಾದಕ್ಕಿಳಿದ ಕಾರಣ ಬೆಳಿಗ್ಗೆಯಿಂದ ಸಂಜೆವರೆಗೂ ಸಮಸ್ಯೆ ಬಗೆಹರಿಯದೆ ಹಾಗೇ ಮುಂದುವರಿದಿತ್ತು.

ಯಾವ ಯೋಜನೆ: 2020-21 ಮತ್ತು 2021-22ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಗಂಗಾ ಕಲ್ಯಾಣ ಯೋಜನೆಯಲ್ಲಿ 40 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ನಿಗಮ ಅನುಮೋದಿಸಿದ ಬೋರ್‌ವೆಲ್‌ ಏಜೆನ್ಸಿ ಮೂಲಕ ಕಳೆದ ವರ್ಷ ಕೊಳವೆಬಾವಿಗಳನ್ನು ಕೊರೆಯಲಾಗಿದ್ದು ಗುರುವಾರ ಸಬ್‌ಮರ್ಸಿಬಲ್‌ ಮೋಟರ್‌, ಪಂಪ್‌, ಸ್ಟಾರ್ಟರ್‌ ಇತರೆ ಸಲಕರಣೆಗಳನ್ನು ವಿತರಿಸಲು ದಿನ ನಿಗದಿಪಡಿಸಲಾಗಿತ್ತು. ಸಾಮಗ್ರಿಗಳನ್ನು ಪಡೆಯುವ ಸಲುವಾಗಿ ಎಲ್ಲ ಫಲಾನುಭವಿಗಳು ಹಾಗೂ ಇತರೆ ರೈತರು ಸ್ಥಳದಲ್ಲಿ ನೆರೆದಿದ್ದರು.

ADVERTISEMENT

ಆಕ್ಷೇಪ ಯಾಕೆ?: ಇತರೆ ಸಲಕರಣೆಗಳು ಸರಿಯಾಗಿದ್ದರೆ ಪೈಪ್‌ಗಳ ವಿಷಯದಲ್ಲಿ ಮಾತ್ರ ಫಲಾನುಭವಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಸುಮಾರು ನಾಲ್ಕೈದು ನೂರು ಅಡಿ ಕೊಳವೆಬಾವಿ ಕೊರೆಯಲಾಗಿದ್ದು ಕೇವಲ 30-40 ಅಡಿ ಮಾತ್ರ ಕಬ್ಬಿಣದ ಪೈಪ್‌ಗಳು ಮತ್ತು ಅಷ್ಟೇ ಕೇಬಲ್‌ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟು ಕಡಿಮೆ ಪ್ರಮಾಣದ ಪೈಪ್‌ಗಳನ್ನು ನೀಡಿದರೆ ಕೊಳವೆಬಾವಿಯಿಂದ ನೀರೆತ್ತಲು ಹೇಗೆ ಸಾಧ್ಯ. ಹಾಗಾಗಿ ಹೆಚ್ಚಿನ ಪೈಪ್‌ಗಳನ್ನು ನೀಡುವವರೆಗೂ ಸಲಕರಣೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಈ ವಿಷಯದಲ್ಲಿ ಅಧಿಕಾರಿಗಳ ಸಮಜಾಯಿಷಿಗೆ ರೈತರು ಒಪ್ಪದ ಕಾರಣ ಸಮಸ್ಯೆ ಜಟಿಲವಾಗಿತ್ತು.

‘ಹಿಂದಿನ ವರ್ಷಗಳಲ್ಲಿ ಕೊಳವೆಬಾವಿಗೆ ಅನುಗುಣವಾಗಿ ಪೈಪ್‌ಗಳನ್ನು ನೀಡಲಾಗಿತ್ತು. ಅಲ್ಲದೆ ಈ ಬಾರಿ ಹೆಚ್ಚುವರಿಯಾಗಿ ಆಳದಲ್ಲಿ ಕೊಳವೆಬಾವಿ ಕೊರೆಯಿಸಿಕೊಂಡ ರೈತರು ಬೋರ್‌ವೆಲ್‌ ಏಜೆನ್ಸಿಯವರಿಗೆ ₹ 40-50 ಸಾವಿರ ಹಣ ನೀಡಿದ್ದಾರೆ. ಅಲ್ಲದೆ ಕೊಳವೆಬಾವಿ ಕೊರೆದಿರುವುದಕ್ಕೆ ಸಂಬಂಧಿಸಿದ ಬಿಲ್‌ ಕೇಳಿದರೆ ಕೊಡುತ್ತಿಲ್ಲ. ಇದರಲ್ಲಿ ಗೋಲ್‌ಮಾಲ್‌ ನಡೆದಿರುವ ಅನುಮಾನವಿದೆ’ ಎಂದು ಫಲಾನುಭವಿಗಳಾದ ರಂಗಪ್ಪ ಪೂಜಾರ, ರಾಮಣ್ಣ ನಸುಗುನ್ನಿ, ಮಂಜುನಾಥ್ ಗಾಣದಾಳ ಇತರರು ಆರೋಪಿಸಿದರು.

ಅಧಿಕಾರಿ ಹೇಳಿದ್ದು: ಈ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಡಿವಾಳಪ್ಪ, ‘ಪ್ರತಿ ಫಲಾನುಭವಿಗೆ ವಿದ್ಯುತ್‌ ಸಂಪರ್ಕ, ಕೊಳವೆಬಾವಿ ಮೋಟರ್ ಎಲ್ಲ ಸೇರಿದಂತೆ ಸರ್ಕಾರ ₹ 2.50 ಲಕ್ಷ ಮಾತ್ರ ನಿಗದಿಪಡಿಸಿದೆ. ಹಾಗಾಗಿ ಅಷ್ಟೇ ಹಣದಲ್ಲಿ ಎಲ್ಲ ಕೆಲಸ ಪೂರೈಸಬೇಕಾಗುತ್ತದೆ. ಆದರೆ ರೈತರು ಹೆಚ್ಚಿಗೆ ಬೋರ್‌ ಕೊರೆಯಿಸಿಕೊಂಡಿದ್ದು ಹೆಚ್ಚಿನ ಪೈಪ್‌ ಕೊಡುವಂತೆ ಪಟ್ಟು ಹಿಡಿದಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಹನುಮನಾಳ ಇತರೆ ಭಾಗದಲ್ಲಿ ಆಳದಲ್ಲಿ ಕೊಳವೆಬಾವಿ ಕೊರೆಯಬೇಕಾಗುತ್ತದೆ, ತಾವರಗೇರಾ ಭಾಗದಲ್ಲಿ ಕಡಿಮೆ ಆಳದಲ್ಲಿ ನೀರು ಸಿಗುತ್ತಿದ್ದು ಅಲ್ಲಿಯ ರೈತರ ಸಮಸ್ಯೆ ಇಲ್ಲದ ಕಾರಣ ಆ ಭಾಗದ ರೈತರು ಸಲಕರಣೆಗಳನ್ನು ಪಡೆಯುತ್ತಿದ್ದುದು ಕಂಡುಬಂದಿತು. ಆದರೆ ಹನುಮನಾಳ, ಹನುಮಸಾಗರ ಭಾಗದ ರೈತರು ಮಾತ್ರ ಸಂಜೆವರೆಗೂ ಹೆಚ್ಚಿನ ಪೈಪ್‌ಗಳಿಗೆ ಪಟ್ಟು ಹಿಡಿದು ಕುಳಿತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.