ಯಲಬುರ್ಗಾ: ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ವಿರುದ್ಧ ಅನಗತ್ಯವಾದ ಆರೋಪಗಳನ್ನು ಮಾಡಿ ಮಠ ಮತ್ತು ಶ್ರೀಗಳ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ ಎಂದು ಮಠದ ಪರ ಭಕ್ತರು ಹೇಳಿಕೆ ನೀಡಿದ್ದಾರೆ.
ಗುರುವಾರ ಮಠದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರ ಸಭೆ ನಡೆದಿದೆ.
ಸಾಕಷ್ಟು ಸಂಖ್ಯೆಯ ಜನರು ಮಠಕ್ಕೆ ನುಗ್ಗಿ ಶ್ರೀಗಳ ವಿರುದ್ಧ ಅಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಕೆಲವರಿಗೆ ಟೆನೆಂಟ್ ಕಾಯ್ದೆ ಅಡಿ ಮಠದ ಭೂಮಿ ಸಿಕ್ಕಿಲ್ಲದ ಕಾರಣ ಈ ರೀತಿ ಮಠದ ಆಸ್ತಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಶ್ರೀಗಳ ವಿರುದ್ದ ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ದುರುದ್ದೇಶದಿಂದ ಕೂಡಿದ ಕೆಲ ಭಕ್ತರ ನಿರ್ಣಯ, ಆರೋಪಗಳು ಮಠಕ್ಕೆ ಧಕ್ಕೆ ತರುವ ಉದ್ದೇಶವಾಗಿದೆ ಎಂದು ಭಕ್ತರಾದ ಅಮರಪ್ಪ ಕಲಬುರ್ಗಿ, ಸಂಗಣ್ಣ ತೆಂಗಿನಕಾಯಿ, ಮಲ್ಲಿಕಾರ್ಜುನ ರಾಮಶೆಟ್ಟಿ, ಮಹಾಂತೇಶ ಗಾಣಿಗೇರ ಸೇರಿ ಅನೇಕರು ಹೇಳಿದರು.
ಸಿದ್ಧಯ್ಯ ಎಂಬಾತ ಮಠದಲ್ಲಿ ಹಣದ ಅವ್ಯವಹಾರ ಮಾಡಿದ್ದಕ್ಕೆ ಕೆಲಸದಿಂದ ತೆಗೆಯಲಾಗಿದೆ. ಭಕ್ತರ ಮನೆಯಲ್ಲಿ ಪೂಜೆಗಾಗಿ ಹೋದಾಗ ಮಠದ ಹೆಸರಲ್ಲಿ ಸಾಕಷ್ಟು ಹಣ ವಸೂಲಿ ಮಾಡಿ ಮಠಕ್ಕೆ ಕೊಡದೇ ಸ್ವಂತಕ್ಕೆ ಬಳಸಿಕೊಂಡಿದ್ದರು. ಅಲ್ಲದೇ ಸ್ವಂತ ಅಂಗಡಿ ಮಾಡಿ ಮಠದ ಪೂಜೆ ಕಾರ್ಯಕ್ರಮದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದ್ದರಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲ ಭಕ್ತರಿಂದ ಕಾನೂನುಬಾಹಿರ ಸಭೆ ಆಯೋಜನೆ, ಟ್ರಸ್ಟ್ ರಚನೆ ಹಾಗೂ ಮಠಕ್ಕೆ ನುಗ್ಗಿ ಶ್ರೀಗಳಿಗೆ ಭಯದ ವಾತಾವರಣ ನಿರ್ಮಿಸಿದ್ದು ಹೀಗೆ ಅನೇಕ ಅಕ್ರಮ ನಡಾವಳಿಗಳಿಂದಾಗಿ ಶ್ರೀಗಳ ಮನಸ್ಸಿಗೆ ನೋವು ಉಂಟಾಗಿದೆ. ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕಾನೂನು ರಿತ್ಯ ಹೋರಾಟಕ್ಕೆ ಶ್ರೀಗಳಿಗೆ ಯಾವತ್ತು ಬೆಂಬಲಿಗರಾಗಿ ನಿಲ್ಲುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸವುಳ್ಳ ಸಂಸ್ಥಾನ ಹಿರೇಮಠವು ಗುರುಸ್ಥಳಮಠವಾಗಿದ್ದು, ಇದಕ್ಕೆ ಶ್ರೀಗಳೇ ವೈಯಕ್ತಿಕ ಅಧಿಕಾರವುಳ್ಳ ಪೀಠವಾಗಿದೆ. ಇದು ಯಾವುದೇ ವಿರಕ್ತಮಠವಾಗಲಿ, ದೇವಸ್ಥಾನವಾಗಲಿ ಅಲ್ಲ. ಮಠಕ್ಕೆ ವಂಶಸ್ಥರೇ ಅಧಿಕಾರ ವಹಿಸಿಕೊಳ್ಳುವುದು ಸಂಪ್ರದಾಯ ಮತ್ತು ಪದ್ಧತಿಯಾಗಿದೆ. ಪಟ್ಟಾಧಿಕಾರ ವಹಿಸಿಕೊಂಡಾಗಿನಿಂದಲೂ ಇಲ್ಲಿಯವರೆಗೂ ಯಾವುದೇ ಆಸ್ತಿಪರಭಾರೆ ಅಥವಾ ಹಣದ ಅವ್ಯವಹಾರ ನಡೆದಿಲ್ಲ. ಆರೋಪಿಸುವವರು ದಾಖಲೆ ಸಹಿತ ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದರು.
ಈ ವೇಳೆ ಭಕ್ತರಾದ ಆನಂದ ಶಿವಪೂಜೆ, ವಿ.ಎಸ್.ಪಾಟೀಲ, ಆರ್.ಎಸ್.ಪಾಟೀಲ, ಶರಣಪ್ಪ, ವೀರಯ್ಯ ಕಲ್ಲೂರು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.