ADVERTISEMENT

ಹೊಲದಲ್ಲೇ ಕೊಳೆತ ಈರುಳ್ಳಿ ಬೆಳೆ: ಸಂಕಷ್ಟದಲ್ಲಿ ರೈತ

5 ಎಕರೆ ಈರುಳ್ಳಿ ಬೆಳೆದು ಮಳೆಯಿಂದ ಕೈಸುಟ್ಟುಕೊಂಡ ರೈತ

ಅನಿಲ್ ಬಾಚನಹಳ್ಳಿ
Published 5 ಡಿಸೆಂಬರ್ 2019, 3:01 IST
Last Updated 5 ಡಿಸೆಂಬರ್ 2019, 3:01 IST
ಕೊಪ್ಪಳ ತಾಲ್ಲೂಕಿನ ಕಾತರಕಿ ಸಮೀಪದ ಹೊಲವೊಂದರಲ್ಲಿ ಅತೀವೃಷ್ಠಿಯಿಂದಾಗಿ ಕೊಳೆತಿರುವ ಉಳ್ಳಾಗಡ್ಡಿ ಫಸಲಿನಲ್ಲಿ ಅಳಿದುಳಿದ ಗಡ್ಡೆಗಳನ್ನು ಹೆಕ್ಕುತ್ತಿರುವ ರೈತ ಮಹಿಳೆಯರು‌ಪ್ರಜಾವಾಣಿ ಚಿತ್ರಗಳು: ಭರತ್ ಕಂದಕೂರ
ಕೊಪ್ಪಳ ತಾಲ್ಲೂಕಿನ ಕಾತರಕಿ ಸಮೀಪದ ಹೊಲವೊಂದರಲ್ಲಿ ಅತೀವೃಷ್ಠಿಯಿಂದಾಗಿ ಕೊಳೆತಿರುವ ಉಳ್ಳಾಗಡ್ಡಿ ಫಸಲಿನಲ್ಲಿ ಅಳಿದುಳಿದ ಗಡ್ಡೆಗಳನ್ನು ಹೆಕ್ಕುತ್ತಿರುವ ರೈತ ಮಹಿಳೆಯರು‌ಪ್ರಜಾವಾಣಿ ಚಿತ್ರಗಳು: ಭರತ್ ಕಂದಕೂರ   

ಕೊಪ್ಪಳ: ಸತತ ಮಳೆಯಿಂದಾಗಿ 5 ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಹೊಲದಲ್ಲಿಯೇ ಕೊಳೆತಿದ್ದು, ರೈತನ ಸಂಕಷ್ಟ ಹೆಚ್ಚುವಂತೆ ಮಾಡಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಪ್ರಸ್ತುತ ಬಂಗಾರಕ್ಕೆ ಇರುವಷ್ಟು ಬೇಡಿಕೆ ಈರುಳ್ಳಿಗೆ ಬಂದಿದೆ. ಆದರೆ ಬೆಳೆ ಇದ್ದಾಗ ಬೆಲೆ ಇಲ್ಲ.ಬೆಲೆ ಇದ್ದಾಗಬೆಳೆ ಇಲ್ಲಎನ್ನುವಂತೆ ರೈತರ ಪರಿಸ್ಥಿತಿ ಆಗಿದೆ.

ತಾಲ್ಲೂಕಿನ ಕಾತರಕಿ ಗ್ರಾಮದ ಹೊರವಲಯದಲ್ಲಿರುವ ರೈತ ಗೋವಿಂದರಾವ್‌ ಕುರಡೇಕರ್‌ ಅವರು 5 ಎಕರೆಯಲ್ಲಿ ಬೆಳೆದ ಈರುಳ್ಳಿ ಈಚೆಗೆ ಸುರಿದ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಹೊಲದಲ್ಲಿಯೇ ಕೊಳೆತು ಹೋಗಿದೆ.

ADVERTISEMENT

'ಕಳೆದ ವರ್ಷ ಸುಮಾರು 680 ಚೀಲ ಈರುಳ್ಳಿ ಬೆಳೆದಿದ್ದೇವೆ.ಉತ್ತಮವಾಗಿ ಬೆಳೆ ಬಂದಿತ್ತು, ಆದರೆ ಸರಿಯಾದ ಬೆಲೆ ಇರಲಿಲ್ಲ. ಪ್ರತಿ ಕ್ವಿಂಟಲ್‌ಗೆ ಕೇವಲ ₹ 900 ಇತ್ತು. ಆದರೆ ಈ ಬಾರಿ ಪ್ರಸ್ತುತ ಕ್ವಿಂಟಲ್‌ಗೆ ₹ 11 ಸಾವಿರ ಬೆಲೆ ಇದೆ. ಆದರೆ ಅತಿಯಾದ ಮಳೆಯಿಂದಾಗಿಕೇವಲ 200 ಚೀಲ ಈರುಳ್ಳಿ ಮಾತ್ರ ಬಂದಿವೆ. 1 ಸಾವಿರ ಚೀಲ ಈರುಳ್ಳಿ ಬೆಳೆಯುವ ನಿರೀಕ್ಷೆ ಇತ್ತು. ಇದರಿಂದ ₹ 10ರಿಂದ ₹ 15 ಲಕ್ಷ ಆದಾಯದ ನಿರೀಕ್ಷೆ ಇತ್ತು. ಆದರೆ ಸತತವಾಗಿ ಸುರಿದ ಮಳೆ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿತು' ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಗೋವಿಂದರಾವ್‌ ಕುರಡೇಕರ.

'ಟ್ರ್ಯಾಕ್ಟರ್‌ ಬಾಡಿಗೆ ₹ 25 ಸಾವಿರ, 5 ಬಾರಿ ಕೀಟನಾಶಕ ಸಿಂಪಡಣೆಗೆ ₹ 60 ಸಾವಿರ, ಕಳೆ ತೆಗೆಯುವುದು, ಗಡ್ಡೆ ಕೀಳುವುದು ಎಲ್ಲ ಸೇರಿ ಸುಮಾರು ₹ 1.50 ಲಕ್ಷದಿಂದ ₹ 2 ಲಕ್ಷದ ವರೆಗೆ ವ್ಯಯಿಸಲಾಗಿದೆ. ಕೊಳೆತ ಈರುಳ್ಳಿಯಲ್ಲಿಯೇ ಆರಿಸಿ ತೆಗೆದು, ತಿಂಗಳ ಮುಂಚೆ ₹ 700ಕ್ಕೆ 100 ಚೀಲ ಈರುಳ್ಳಿ ಮಾರಾಟ ಮಾಡಿದ್ದೇವೆ. ಇನ್ನೂ 100 ಚೀಲ ಈರುಳ್ಳಿ ತೆಗೆಯಬಹುದು. ಈರುಳ್ಳಿ ಗುಣಮಟ್ಟವಾಗಿಲ್ಲ. ಇದರಿಂದ ಸುಮಾರು ₹ 1 ಲಕ್ಷ ಬರಬಹುದು. ಇದರಿಂದ ವ್ಯಯಿಸಿದ ಹಣವೂ ವಾಪಾಸಾಗುವುದಿಲ್ಲ' ಎಂದು ಅವರು ಅಳಲು ತೋಡಿಕೊಂಡರು.

ಕಳೆದ ಬಾರಿ ಹೆಚ್ಚು ಖರ್ಚಾಗಿರಲಿಲ್ಲ. ಮಳೆ ಆಗಿದ್ದರಿಂದ ರೋಗಗಳ ಭೀತಿ ಹೆಚ್ಚಿತ್ತು. ಹಾಗಾಗಿ 2 ಬಾರಿ ಸಿಂಪಡಿಸಬೇಕಾಗಿದ್ದ ಕೀಟನಾಶಕವನ್ನು ಬೆಳೆ ರಕ್ಷಣೆಗಾಗಿ 5 ಬಾರಿ ಸಿಂಪಡಿಸಿದ್ದೇವೆ. ಒಂದು ಬಾರಿ ಸಿಂಪಡಿಸಿದರೆ, ₹ 11 ಸಾವಿರ ಖರ್ಚಾಗುತ್ತದೆ. ಅಲ್ಲದೇ 2 ಸಲ ತೆಗೆಯಬೇಕಿದ್ದ ಕಳೆಯನ್ನು ಈ ಬಾರಿ 5 ಸಲ ತೆಗೆದಿದ್ದೇವೆ. ಒಂದು ಸಲ ಕಳೆ ತೆಗೆದರೆ ₹ 10 ಸಾವಿರ ವ್ಯಯವಾಗುತ್ತದೆ. ಮಳೆಯಿಂದಾಗಿಯೇ ಒಟ್ಟು ಖರ್ಚು ಹೆಚ್ಚಾಗಿದೆ. ಆದರೆ ಅಂದುಕೊಂಡಷ್ಟು ಲಾಭ ಬಂದಿಲ್ಲ ಎನ್ನುತ್ತಾರೆ ರೈತ

ಪ್ರತಿ ವರ್ಷ ಈರುಳ್ಳಿ ಬೆಳೆಯುತ್ತಿದ್ದು, ಬೆಳೆ ನಾಟಿ ಮಾಡಿದಾಗಿನಿಂದ ತೆಗೆಯುವವರೆಗೆ 8ರಿಂದ 9 ಬಾರಿ ನೀರು ಕೊಡುತ್ತಿದ್ದರು. ಆದರೆ ಈ ಬಾರಿ ಕೇವಲ 3 ಬಾರಿ ನೀರು ಹರಿಸಿದ್ದರೂ ಸತತ ಮಳೆ ಬೆಳೆಯನ್ನು ಹಾಳು ಮಾಡಿದೆ. ಇದರಿಂದರೈತನಿಗೂ ನಷ್ಟ ಆಗಿದೆ. ಪೂರೈಕೆ ಕಡಿಮೆ ಆಗಿ, ಬೇಡಿಕೆ ಹೆಚ್ಚಾಗಿದ್ದರಿಂದ ಈರುಳ್ಳಿ ಬೆಲೆ ಸಾಮಾನ್ಯವಾಗಿಯೇ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೂ ತಲೆನೋವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.