ADVERTISEMENT

ಕೊಪ್ಪಳ | ಭೂಮಿ ಕಬಳಿಕೆ ಆರೋಪ; ಕ್ರಮಕ್ಕೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 7:02 IST
Last Updated 20 ಜುಲೈ 2024, 7:02 IST
ಕೊಪ್ಪಳದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹೇರೂರು ಗ್ರಾಮದವರು ಸರ್ಕಾರಿ ಜಮೀನು ಒತ್ತುವರಿ ತಡೆಯಬೇಕು ಎಂದು ಆಗ್ರಹಿಸಿದರು
ಕೊಪ್ಪಳದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹೇರೂರು ಗ್ರಾಮದವರು ಸರ್ಕಾರಿ ಜಮೀನು ಒತ್ತುವರಿ ತಡೆಯಬೇಕು ಎಂದು ಆಗ್ರಹಿಸಿದರು   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಸರ್ವೆ ಸಂಖ್ಯೆ ಒಂದರಲ್ಲಿ 14 ಎಕರೆ 20 ಗುಂಟೆ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಳ್ಳಲಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಹಾಗೂ ಅತಿಕ್ರಮಣ ತೆರವು ಮಾಡಬೇಕು ಎಂದು ಗ್ರಾಮದ ಹಲವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಆಗ್ರಹಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದು ‘ಸರ್ಕಾರಿ ಗೋಮಾಳ, ಗಾಯರಾಣ ಭೂಮಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದಲ್ಲಿನ ಶ್ರೀಮಂತರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಹಣ ಪಡೆದುಕೊಂಡು ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಗ್ರಾಮದಲ್ಲಿ ವಿವಿಧ ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಸರ್ಕಾರಿ ಜಮೀನು ಅಗತ್ಯವಿದ್ದು, ಈ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ಪ್ರತ್ಯೇಕ ಕೃಷಿ ಬಜೆಟ್‌ಗೆ ಆಗ್ರಹ: ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಅನ್ನದಾತರಿಗೆ ಪ್ರತ್ಯೇಕ ಬಜೆಟ್‌ ಮಂಡನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಪ್ರಮುಖರು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಬರೆದು ಶುಕ್ರವಾರ ಸಲ್ಲಿಸಿದರು.

ಕೃಷಿ ಕ್ಷೇತ್ರ ಕಾರ್ಪೊರೇಟಿಕರಣ ಆಗದಂತೆ ಕ್ರಮ ವಹಿಸಬೇಕು. ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿ ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಸುಂಕಪ್ಪ ಗದಗ, ಕಾಶೀಂಸಾಬ್‌ ಸರ್ದಾರ, ಬಸವರಾಜ ನರೇಗಲ್‌, ಬಸವರಾಜ ಶೀಲವಂತರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.          

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕೊಪ್ಪಳ ತಾಲ್ಲೂಕು ಘಟಕದ ವತಿಯಿಂದಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಕಡ್ಡಾಯವಾಗಿ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಯಿತು
ಮೀಸಲಾತಿಗೆ ತಡೆ ನೀಡಿದ ಕ್ರಮಕ್ಕೆ ವಿರೋಧ
ಕೊಪ್ಪಳ: ನಮ್ಮ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೊಳಿಸಲು ಅಧಿವೇಶನದಲ್ಲಿ ಅಂಗೀಕಾರ ಮಾಡಿದ್ದು ಕೆಲವು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ಈಗ ತಡೆ ಹಿಡಿದಿರುವುದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ್ರ ಬಣ) ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ರಾಜ್ಯದಲ್ಲಿನ ಉದ್ಯಮಿಗಳು ಸರ್ಕಾರದ ಎಲ್ಲ ಸವಲತ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಂಡು ಬೆಂಗಳೂರಿನಂಥ ಮಹಾನಗರದಲ್ಲಿ ದೊಡ್ಡ ಕಂಪನಿಗಳನ್ನು ನಡೆಸುತ್ತ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇವರು ಕನ್ನಡಿಗರಿಗೆ ಉದ್ಯೋಗ ಕೊಡುವುದಕ್ಕೆ ಹಿಂದೇಟು ಹಾಕುತ್ತಿರುವುದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.