ADVERTISEMENT

ಬಿ.ಆರ್‌. ಪಾಟೀಲ ದೂರು ಕೊಟ್ಟರೆ ಕ್ರಮ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 13:16 IST
Last Updated 22 ಜೂನ್ 2025, 13:16 IST
ಜಿ. ಪರಮೇಶ್ವರ್
ಜಿ. ಪರಮೇಶ್ವರ್   

ಕೊಪ್ಪಳ:ಕೊಪ್ಪಳ: ‘ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದರಷ್ಟೇ ಮನೆ ಮಂಜೂರು ಮಾಡಲಾಗುತ್ತದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್‌. ಪಾಟೀಲ ಹೇಳಿಕೆ ಕುರಿತು ಅವರು ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಾಟೀಲ ಅವರು ಮಾಡಿರುವುದು ಗಂಭೀರ ಆರೋಪವೇನಲ್ಲ. ಅವರು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಲಿ’ ಎಂದರು.

ಸಚಿವ ಎಚ್.ಕೆ.ಪಾಟೀಲ ಅವರು ಗಣಿ ಅಕ್ರಮದ ಬಗ್ಗೆ ಪತ್ರ ಬರೆದಿದ್ದು ‘ಗಣಿ ಅಕ್ರಮದಲ್ಲಿ ₹ 1.5 ಲಕ್ಷ ಕೋಟಿ ದುರ್ಬಳಕೆಯಾಗಿದೆ ಎಂದಿದ್ದಾರೆ. ಲೂಟಿ ಮಾಡಿದವರಿಂದಲೇ ಹಣ ವಸೂಲಿ ಮಾಡಬೇಕು ಹಾಗೂ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇವೆ, ಯಾರ ಮೇಲೂ ಒತ್ತಡ ಹೇರಿಲ್ಲ. ಹಿಂದೆ ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ವಾಗಿದ್ದರಿಂದ ಖಾಲಿ ಉಳಿದ ಹುದ್ದೆಗಳನ್ನು ಐದು ವರ್ಷಗಳಿಂದ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅರ್ಹರಿಗೆ ಆದೇಶ ಪ್ರತಿ ನೀಡಲಾಗುವುದು’ ಎಂದು ಹೇಳಿದರು.

ಮುಜುಗರ ಇಲ್ಲ: ‘ಬಿ.ಆರ್‌. ಪಾಟೀಲ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗುವಂಥದ್ದು ಏನೂ ಇಲ್ಲ‌. ಅವರು ಹಿರಿಯ ರಾಜಕಾರಣಿಯಾಗಿದ್ದು ನೇರವಾಗಿ ಮಾತನಾಡುವ ಸ್ವಭಾವ ರೂಢಿಸಿಕೊಂಡಿದ್ದಾರೆ’ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಭೋಸರಾಜು ಹೇಳಿದರು.

‘ರಾಜ್ಯದ ಆಡಳಿತದಲ್ಲಿ ಹಿಂದೆ ಈ ರೀತಿ ಆಗಿವೆ. ಪಾಟೀಲರ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಿರ್ದಿಷ್ಟವಾಗಿ ಯಾವ ಪ್ರಕರಣ ದಲ್ಲಿ ಅನ್ಯಾಯವಾಗಿದೆ ಎನ್ನುವುದನ್ನು ದಾಖಲೆ ಸಮೇತ ದೂರು ನೀಡಲಿ’ ಎಂದರು.

‘ಮಾಹಿತಿ ಇಲ್ಲದೆ ಬಿಆರ್‌ಪಿ ಸುಳ್ಳು ಆರೋಪ’

ಹಾರೋಹಳ್ಳಿ (ರಾಮನಗರ): ‘ಹಣ ನೀಡಿದವರಿಗಷ್ಟೇ ಮನೆ ಮಂಜೂರು ಮಾಡಲಾಗು ತ್ತಿದೆ ಎಂಬುದೆಲ್ಲ ಸುಳ್ಳು. ಯಾರೋ ಒಬ್ಬರು ಹೇಳಿದ ಮಾತ್ರಕ್ಕೆ ಇದೆಲ್ಲವೂ ಸತ್ಯ ಆಗುತ್ತದೆಯೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬಿ.ಆರ್. ಪಾಟೀಲ ಆರೋಪಕ್ಕೆ ಭಾನುವಾರ ಇಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ನಾನು ಅಥವಾ ನೀವು ಬಂದು ಗ್ರಾಮಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲಾಗುತ್ತದೆಯೆ? ಯಾರಿಗೆ ಮನೆ ಕೊಡಬೇಕು ಎಂಬುದನ್ನು ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ನಿರ್ಧರಿಸುತ್ತವೆ’ ಎಂದು ಸಮರ್ಥಿಸಿಕೊಂಡರು.

‘ವಸತಿ ನಿಗಮದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಆದರೆ, ಶಾಸಕ ಬಿ.ಆರ್. ಪಾಟೀಲಗೆ ಪೂರ್ಣ ಮಾಹಿತಿ ಇದೆಯೋ ಇಲ್ಲವೊ ಗೊತ್ತಿಲ್ಲ’ ಎಂದರು.

‘ಪಾಟೀಲ ಹೇಳಿಕೆಯಲ್ಲಿ ಅಚ್ಚರಿ ಏನಿಲ್ಲ’

ಮಂಡ್ಯ: ‘ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದಂತೆ ಸಚಿವರೇ ಎಲ್ಲವನ್ನೂ ಶುರು ಮಾಡಿಕೊಂಡು, ಎಷ್ಟು ಕೊಡಬೇಕೆಂದು ಆಯಾ ಇಲಾಖೆಗಳಲ್ಲಿ ಫಿಕ್ಸ್ ಮಾಡಿಕೊಂಡಿದ್ದಾರೆ. ಹೀಗಿರುವಾಗ ವಸತಿ ಇಲಾಖೆಯಲ್ಲಿ ಹಣ ಕೊಟ್ಟವರಿಗೆ ಮನೆ ಎಂದು ಶಾಸಕ ಬಿ.ಆರ್.ಪಾಟೀಲ ಅವರು ಹೇಳಿಕೆ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ಹಲವು ಇಲಾಖೆಯಲ್ಲಿ ದುಡ್ಡು ಬಿಡುಗಡೆಗೆ ಶಾಸಕರೇ ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್ ಕೊಡಿ‌ ಸರ್, ದುಡ್ಡು ತೆಗೆದುಕೊಂಡು ಬರುತ್ತೇವೆ ಎನ್ನುತ್ತಿದ್ದಾರೆ. ಹೆಸರಿಗೆ ಶಾಸಕರ ಲೆಟರ್, ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ. ಬಹಳ ಮಂದಿ ನನ್ನ ಬಳಿಯೂ ಮನೆ ಮಂಜೂರು ಮಾಡಿಸಿಕೊಂಡು ತರಲು ಅಷ್ಟು ಕೊಟ್ಟಿದ್ದೇವೆ ಎಂದು ಚರ್ಚಿಸಿದ್ದಾರೆ’ ಎಂದು ತಿಳಿಸಿದರು.

‘ಈ ಸರ್ಕಾರದ ಬಗ್ಗೆ ಚರ್ಚೆಯ ಅವಶ್ಯಕತೆ ಇಲ್ಲ. 2028ಕ್ಕೆ ಮುಖ್ಯಮಂತ್ರಿ ಆಗುವ ಬಗ್ಗೆ ಡಿ.ಕೆ.ಶಿವಕುಮಾರ್‌ ಕನಸು ಕಾಣಬೇ ಕಷ್ಟೆ’ ಎಂದರು.,

ಫಲಾನುಭವಿಗಳ ಆಯ್ಕೆ ಸಭೆಯಲ್ಲಿ ಹಣ ಹಂಚಿಕೆ ವಾಗ್ವಾದ

ಕಲಬುರಗಿ: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದವರಿಗಷ್ಟೇ ಮನೆಗಳು ಮಂಜೂರು ಆರೋಪ ಪ್ರಕರಣದಲ್ಲಿ ಶಾಸಕ ಬಿ.ಆರ್. ಪಾಟೀಲ ಅವರು ಆಳಂದ ತಾಲ್ಲೂಕಿನ ಧಂಗಾಪುರ ಗ್ರಾಮ ಪಂಚಾಯಿತಿ ಉಲ್ಲೇಖಿಸಿದ್ದರು. ಧಂಗಾಪುರ ಗ್ರಾ.ಪಂ.ನ ಫಲಾನುಭವಿಗಳ ಆಯ್ಕೆಯ ಸಭೆಯಲ್ಲಿ ಮನೆಗಳನ್ನು ಹಣ ಕೊಟ್ಟು ತಂದಿರುವುದಾಗಿ ಹೇಳಿಕೆ ನೀಡಿದ್ದರ ವಾಗ್ವಾದದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮನೆಗಳ ಹಂಚಿಕೆ ಸಂಬಂಧ ಬಟ್ಟರ್ಗಾ ಗ್ರಾಮದಲ್ಲಿ ಜನವರಿ 21ರಂದು ಸಭೆ ಜರುಗಿತ್ತು. ಪಿಡಿಒ ಮಂಜೂರ್ ಪಟೇಲ್‌, ಅಧ್ಯಕ್ಷೆ ಕಾಶಿಬಾಯಿ ಭಿಮಶಾ ದೊಡ್ಡಮನಿ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಬಿಳಿಯ ಹಾಳೆಯ ಮೇಲೆ ಆಕಾಂಕ್ಷಿಗಳ ಹೆಸರು ಬರೆಯುವಂತೆ ಅಧ್ಯಕ್ಷೆಯ ಪುತ್ರ ಸೂಚಿಸಿದ್ದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪಂಚಾಯಿತಿಯ ಪುಸ್ತಕದಲ್ಲೇ ಹೆಸರುಗಳನ್ನು ಬರೆಯಬೇಕು ಎಂದು ತಾಕೀತು ಮಾಡಿದರು. 

ಕೆಲ ನಿಮಿಷಗಳ ಬಳಿಕ ಅಧ್ಯಕ್ಷೆಯ ಪುತ್ರ, ‘ಈ ಹಿಂದಿನ ಸರ್ಕಾರದ ಮನೆಗಳು ಎಲ್ಲಿ ಬಂದಿವೆ? ನಾವು ಹಾಕಿಕೊಂಡು (ದುಡ್ಡು) ತಂದಿದ್ದೇವೆ’ ಎಂದರು. ಇದಕ್ಕೆ ಆಕ್ಷೇಪಿಸಿದ ಕೆಲವರು, ‘ನೀವು ಹಾಕಿಕೊಂಡು ತಂದಿದ್ದರೆ ಗ್ರಾಮ ಸಭೆಯನ್ನು ಏಕೆ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು. ಶಾಂತಯ್ಯ ಎಂಬುವವರು ಮಧ್ಯ ಪ್ರವೇಶಿಸಿ, ‘ದುಡ್ಡು ಕೊಟ್ಟು ಮಾಡುವುದಿದ್ದರೆ ಅದನ್ನು ಪತ್ರದಲ್ಲಿ ಬರೆದು ಕೊಡಬೇಕು’ ಎಂದು ಏರು ಧ್ವನಿಯಲ್ಲಿ ಅಧ್ಯಕ್ಷೆಯ ಪುತ್ರನಿಗೆ ತಾಕೀತು ಮಾಡಿದರು. ಇದಕ್ಕೆ ಪ್ರತಿಯಾಗಿ ‘ದುಡ್ಡು ಕೊಟ್ಟಿದ್ದೇನೆ ಎಂದು ನಾನು ಹೇಳಿಲ್ಲ’ ಎನ್ನುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ಶಾಂತಯ್ಯ ಹಾಗೂ ಅಧ್ಯಕ್ಷೆಯ ಪುತ್ರನ ನಡುವೆ ವಾಗ್ವಾದ ಜೋರಾಗುತ್ತಿದ್ದಂತೆ ಸಭೆಯಲ್ಲಿ ಇದ್ದವರೂ ಪರಸ್ಪರ ಮಾತಿನ ಚಕಮಕಿಗೆ ಇಳಿದರು. ಈ ನಡುವೆ ಗ್ರಾಮಸ್ಥರೊಬ್ಬರು ಮತ್ತೊಬ್ಬನಿಗೆ ‘ಹಣ ಕೊಟ್ಟಿದ್ದೀಯಾ’ ಎಂದು ಪ್ರಶ್ನಿಸಿದರು. ‘ಹೌದು ₹ 10 ಸಾವಿರ ಕೊಟ್ಟಿದ್ದೇನೆ’ ಎಂದು ಇಬ್ಬರೂ ನಗಾಡುವುದು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.